ವಾಷಿಂಗ್ಟನ್: ಚೀನಾದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಕರೆ ನೀಡಿದ ಬೆನ್ನಲ್ಲೇ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾಗೆ ಅಮೆರಿಕ ಕೂಡ ಒಂದು ‘ಬೆದರಿಕೆ’ ಎಂದು ಹೇಳಿಕೆ ನೀಡಿದ್ದಾರೆ. ಸಿಬಿಎಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಚೀನಾ ನಮ್ಮನ್ನು ಸದಾ ಗಮನಿಸುತ್ತಿರುತ್ತದೆ” ಎಂದು ಒತ್ತಿ ಹೇಳಿದ್ದಾರೆ.
ಚೀನಾವು ಅಮೆರಿಕದ ಪವರ್ ಗ್ರಿಡ್ ಮತ್ತು ಜಲಮಾರ್ಗ ವ್ಯವಸ್ಥೆಗಳಿಗೆ ನುಸುಳಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಆರೋಪಿಸಿರುವ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. “ನಾವೂ ಅವರಿಗೆ ಬೆದರಿಕೆಯಾಗಿದ್ದೇವೆ. ಅವರು ನಮಗೆ ಏನು ಮಾಡುತ್ತಾರೆಂದು ನೀವು ಹೇಳುತ್ತೀರೋ, ಅದಕ್ಕಿಂತ ಹೆಚ್ಚಿನವನ್ನು ನಾವೇ ಅವರಿಗೆ ಮಾಡುತ್ತೇವೆ” ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
“ಇದು ಅತ್ಯಂತ ಸ್ಪರ್ಧಾತ್ಮಕ ಜಗತ್ತು, ವಿಶೇಷವಾಗಿ ಚೀನಾ ಮತ್ತು ಅಮೆರಿಕದ ನಡುವೆ ಸ್ಪರ್ಧೆ ತುಸು ಹೆಚ್ಚೇ ಇದೆ. ನಾವು ಅವರನ್ನು ಗಮನಿಸುತ್ತಿರುತ್ತೇವೆ, ಅವರೂ ನಮ್ಮ ಮೇಲೆ ಕಣ್ಣಿಟ್ಟಿರುತ್ತಾರೆ. ಆದರೆ, ಅವರೊಂದಿಗೆ ಸಂಘರ್ಷಕ್ಕಿಳಿಯುವುದಕ್ಕಿಂತ, ಒಟ್ಟಾಗಿ ಕೆಲಸ ಮಾಡುವುದರಿಂದ ನಾವು ಇನ್ನಷ್ಟು ದೊಡ್ಡದಾಗಿ, ಉತ್ತಮವಾಗಿ ಮತ್ತು ಬಲಿಷ್ಠವಾಗಿ ಬೆಳೆಯಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಚೀನಾದ ಪರಮಾಣು ಶಕ್ತಿ ಕುರಿತು ಟ್ರಂಪ್ ಹೇಳಿದ್ದೇನು?
ಚೀನಾದ ಪರಮಾಣು ಶಸ್ತ್ರಾಗಾರದ ಬಗ್ಗೆ ಮಾತನಾಡಿದ ಟ್ರಂಪ್, ಬೀಜಿಂಗ್ “ಅತ್ಯಂತ ವೇಗವಾಗಿ ಅಣ್ವಸ್ತ್ರಗಳನ್ನು ತಯಾರಿಸುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. “ನಮ್ಮಲ್ಲಿ ಬೇರೆಲ್ಲಾ ದೇಶಗಳಿಗಿಂತ ಹೆಚ್ಚು ಪರಮಾಣು ಅಸ್ತ್ರಗಳಿವೆ. ರಷ್ಯಾ ಎರಡನೇ ಸ್ಥಾನದಲ್ಲಿದೆ. ಚೀನಾ ಮೂರನೇ ಸ್ಥಾನದಲ್ಲಿದ್ದರೂ, ಮುಂದಿನ ಐದು ವರ್ಷಗಳಲ್ಲಿ ಸಮನಾಗಲಿದೆ. ಹಾಗಾಗಿ, ನಾವು ನಿಶ್ಯಸ್ತ್ರೀಕರಣದ ಬಗ್ಗೆ ಏನಾದರೂ ಮಾಡಬೇಕು” ಎಂದು ಅವರು ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇಬ್ಬರೊಂದಿಗೂ “ನಿಶ್ಯಸ್ತ್ರೀಕರಣ” ಕುರಿತು ಚರ್ಚಿಸಿರುವುದಾಗಿ ಟ್ರಂಪ್ ತಿಳಿಸಿದ್ದಾರೆ. “ವಿಶ್ವವನ್ನು 150 ಬಾರಿ ನಾಶಪಡಿಸಬಲ್ಲಷ್ಟು ಪರಮಾಣು ಅಸ್ತ್ರಗಳು ನಮ್ಮ ಬಳಿ ಇವೆ. ರಷ್ಯಾ ಬಳಿಯೂ ಸಾಕಷ್ಟು ಇವೆ, ಚೀನಾ ಬಳಿಯೂ ಶೀಘ್ರದಲ್ಲಿ ಸಾಕಷ್ಟು ಶಸ್ತ್ರಾಸ್ತ್ರಗಳು ಇರಲಿವೆ,” ಎಂದು ಅವರು ಎಚ್ಚರಿಸಿದ್ದಾರೆ.
ಇತ್ತೀಚೆಗೆ ಅಮೆರಿಕದ ಪರಮಾಣು ಅಸ್ತ್ರ ಪರೀಕ್ಷೆಗೆ ನೀಡಿದ್ದ ಆದೇಶವನ್ನು ಸಮರ್ಥಿಸಿಕೊಂಡ ಅವರು, “ಚೀನಾ ಮತ್ತು ರಷ್ಯಾ ಕೂಡ ತಮ್ಮ ಅಣ್ವಸ್ತ್ರಗಳನ್ನು ಪರೀಕ್ಷಿಸುತ್ತಿವೆ, ಆದರೆ ನಿಮಗೆ ಅದರ ಬಗ್ಗೆ ತಿಳಿದಿರುವುದಿಲ್ಲ” ಎಂದರು.
ಆರ್ಥಿಕ ಶಕ್ತಿಯ ಬಗ್ಗೆ ಉಲ್ಲೇಖ
ಚೀನಾಗೆ ಹೋಲಿಸಿದರೆ ಅಮೆರಿಕ ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳಿದ ಟ್ರಂಪ್, ‘ವಿರಳ ಖನಿಜ’ಗಳ (Rare Earth Minerals) ವಿಷಯದಲ್ಲಿ ಬೀಜಿಂಗ್, ವಾಷಿಂಗ್ಟನ್ ಮೇಲೆ ಹಿಡಿತ ಹೊಂದಿದೆ ಎಂದು ಒಪ್ಪಿಕೊಂಡರು. “ಅವರು ನಮ್ಮ ವಿರುದ್ಧ ಆ ಶಕ್ತಿಯನ್ನು ಬಳಸಿದರೆ, ನಾವು ಅವರ ವಿರುದ್ಧ ಬೇರೆ ಅಸ್ತ್ರಗಳನ್ನು ಬಳಸುತ್ತೇವೆ. ಉದಾಹರಣೆಗೆ, ವಿಮಾನದ ಬಿಡಿಭಾಗಗಳು. ನಾವು ಅವರಿಗೆ ಬೋಯಿಂಗ್ ವಿಮಾನಗಳ ಭಾಗಗಳನ್ನು ನೀಡುವುದನ್ನು ನಿಲ್ಲಿಸಬಹುದು. ಅಂತಿಮವಾಗಿ, ನಮ್ಮ ಬಳಿಯಿರುವ ಅತಿದೊಡ್ಡ ಅಸ್ತ್ರವೆಂದರೆ ಸುಂಕ” ಎಂದು ಟ್ರಂಪ್ ಹೇಳಿದ್ದಾರೆ.
ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ನಡೆದ 32ನೇ ಎಪೆಕ್ ಆರ್ಥಿಕ ಸಚಿವರ ಸಭೆಯಲ್ಲಿ ಟ್ರಂಪ್ ಮತ್ತು ಕ್ಸಿ ಜಿನ್‌ಪಿಂಗ್ ಆರು ವರ್ಷಗಳ ನಂತರ ಮೊದಲ ಬಾರಿಗೆ ಮುಖಾಮುಖಿಯಾಗಿ ಭೇಟಿಯಾಗಿದ್ದರು.
ಇದನ್ನೂ ಓದಿ : ಮೈಸೂರಲ್ಲಿ ಭೀಕರ ಅಪಘಾತ – ಬೈಕ್ಗೆ ಬಸ್ ಡಿಕ್ಕಿಯಾಗಿ ದಂಪತಿ, ಮಗ ಸಾವು!



















