ನವದೆಹಲಿ: ಉತ್ತರ ಪ್ರದೇಶದ (Uttar Pradesh) ಹತ್ರಾಸ್ ನಲ್ಲಿ (Hathras Stampede) ಇತ್ತೀಚೆಗೆ ನಡೆದಿದ್ದ ಕಾಲ್ತುಳಿದ ಪ್ರಕರಣದಲ್ಲಿ 121 ಜನರ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯು ಪೊಲೀಸರಿಗೆ ಶರಣಾಗಿದ್ದಾನೆ.
ಪ್ರಮುಖ ಆರೋಪಿ ದೇವಪ್ರಕಾಶ್ ಮಧುಕರ್ ದೆಹಲಿಯಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಆತನನ್ನು ಸದ್ಯ ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಧುಕರ್ ಸತ್ಸಂಗದ ಮುಖ್ಯ ಸೇವಾದಾರನಾಗಿದ್ದ. ಈತನ ವಿರುದ್ಧ ಹತ್ರಾಸ್ ನ ಸಿಕಂದರಾ ರಾವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಈ ವೇಳೆ ದೆಹಲಿಯ ಪೊಲೀಸರು, ಎಸ್‍ಐಟಿ ಮತ್ತು ಎಸ್‍ಟಿಎಫ್‍ಗೆ ಕರೆ ಮಾಡಿ ಶರಣಾಗಿದ್ದಾನೆ ಎಂದು ಆತನ ವಕೀಲರು ವೀಡಿಯೋ ಸಂದೇಶದ ಮೂಲಕ ಹೇಳಿದ್ದಾರೆ.

ಮಧುಕರ್ ಯಾವುದೇ ತಪ್ಪು ಮಾಡದ ಕಾರಣ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ. ಈ ಪ್ರಕರಣದಲ್ಲಿ ನಮ್ಮ ಅಪರಾಧವೇನು? ವಿಚಾರಣೆ ವೇಳೆ ಆತನಿಗಿರುವ ಹೃದಯ ಸಮಸ್ಯೆಯನ್ನು ಪೊಲೀಸರು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಆರೋಪಿಯ ಪರ ವಕೀಲರು ಹೇಳಿದ್ದಾರೆ.
ಮಧುಕರ್ ಬಂಧನಕ್ಕೆ ಸಹಕಾರಿಯಾಗುವ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಉತ್ತರ ಪ್ರದೇಶ ಪೊಲೀಸರು ಘೋಷಿಸಿದ್ದರು. ಬಾಬಾನ (Bhole Baba) ಸತ್ಸಂಗದ ಸಂಘಟನಾ ಸಮಿತಿಯ ಸದಸ್ಯರಾಗಿದ್ದ ಇಬ್ಬರು ಮಹಿಳಾ ಸ್ವಯಂ ಸೇವಕರು ಸೇರಿದಂತೆ 6 ಜನರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
