ಹಾಸನ:ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಹಾಸನಾಂಬೆ ಬಾಗಿಲು ಮುಚ್ಚಲಾಗಿದೆ. ಹೀಗಾಗಿ ಒಂದು ವಾರ ಭಕ್ತರ ತಂಡು ತಾಯಿಯ ದರ್ಶನಕ್ಕೆ ಹರಿದು ಬಂದಿತ್ತು.
11 ದಿನಗಳಿಂದ ನಡೆಯುತ್ತಿದ್ದ ಹಾಸನಾಂಬೆ ಉತ್ಸವಕ್ಕೆ ತೆರೆಬಿದ್ದಿದ್ದು, ಇಂದು ಮಧ್ಯಾಹ್ನ 12.33ಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ದೇಗುಲದ ಗರ್ಭಗುಡಿಯನ್ನು ಮುಚ್ಚಲಾಯಿತು. ದೇಗುಲ ಒಳಭಾಗದಲ್ಲಿ ಸ್ವಚ್ಚತೆ, ಸಿಂಗಾರ, ಪೂಜಾ ಕೈಂಕರ್ಯಗಳನ್ನು ಮುಗಿಸಿ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಲಾಯಿತು.
ಅಕ್ಟೋಬರ್ 24 ರಂದು ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗಿತ್ತು. ಅಕ್ಟೋಬರ್ 25 ರಿಂದ ನವೆಂಬರ್ 3 ರ ವರೆಗೆ ಬೆಳಗ್ಗೆ 6 ಗಂಟೆಯವರೆಗೂ ಭಕ್ತರ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು. ಇಂದು ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ಆದರೆ, ಈ ಬಾರಿ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಭಕ್ತರು ಆಗಮಿಸಿದ್ದರು. ಹೀಗಾಗಿ ಈ ಬಾರಿಯೂ ಕೋಟ್ಯಾಂತರ ರೂ. ಆದಾಯ ಹರಿದು ಬಂದಿದೆ.
ಭಕ್ತರು ಹಾಸನಾಂಬೆ ದರ್ಶನ ಪಡೆದು ಪುನೀತರಾಗಿದ್ದಾರೆ. ಕಳೆದ ವರ್ಷ 14 ಲಕ್ಷ ಭಕ್ತರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದರು. ಆದರೆ, ಈ ಬಾರಿ 18 ಲಕ್ಷಕ್ಕೂ ಅಧಿಕ ಭಕ್ತರು ಅಮ್ಮನ ದರ್ಶನ ಪಡೆದು ಪುನೀತರಾಗಿದ್ದಾರೆ. ಹೆಚ್ಚು ಭಕ್ತರು ಆಗಮಿಸಿದ್ದರು. ಹೀಗಾಗಿ ಸ್ವಲ್ಪ ಅಸ್ತವ್ಯಸ್ಥ ಉಂಟಾಗಿದೆ. ಅಧಿಕ ಪ್ರಮಾನದ ವಿವಿಐಪಿ ಪಾಸ್ ಕೊಟ್ಟಿದ್ದರಿಂದ ಸಾರ್ವಜನಿಕರ ದರ್ಶನಕ್ಕೆ ಸಮಸ್ಯೆ ಉಂಟಾಗಿದೆ. ಹೀಗಾಗಿ ಕೊನೆಗೆ ಪಾಸ್ ದರ್ಶನ ರದ್ದು ಮಾಡಲಾಯಿತು. ದೂರದಿಂದ ಬಂದಿದ್ದ ಭಕ್ತರು ದರ್ಶನಕ್ಕೆ ಗಂಟೆಗಟ್ಟಲೇ ಕ್ಯೂನಲ್ಲಿ ನಿಂತು ಪರದಾಡಿದ್ದಾರೆ.
ಲಕ್ಷಾಂತರ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದರೆ, ಕೋಟ್ಯಾಂತರ ರೂಪಾಯಿ ಆದಾಯ ಸಹ ಹರಿದು ಬಂದಿದೆ. 9 ದಿನ ಸಾರ್ವಜನಿಕ ದರ್ಶನದಲ್ಲಿ ಬರೋಬ್ಬರಿ 9.3 ಕೋಟಿ ರೂ. ಹಣ ಸಂಗ್ರಹವಾಗಿದೆ. ಕೇವಲ 1000 ರೂ, 300 ರೂ. ಟಿಕೆಟ್ ಮಾರಾಟ ಹಾಗು ಲಡ್ಡು ಪ್ರಸಾದ ಮಾರಾಟ ದಿಂದ 9.3 ಕೋಟಿ ಆದಾಯ ಬಂದಿದೆ. ಆದರೆ, ಹುಂಡಿ ಕಾಣಿಕೆಯ ಎಣಿಕೆ ಇನ್ನೂ ಆಗಿಲ್ಲ. ಟಿಕೆಟ್, ಪ್ರಸಾದಿಂದಲೇ 9 ಕೋಟಿ ರೂ. ಬಂದಿದೆ.