ಹಾಸನ : ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ಗುರುವಾರ ಮಧ್ಯಾಹ್ನ 12:21ಕ್ಕೆ ತೆರೆಯಲಾಯಿತು. ಅರಸು ವಂಶಸ್ಥ ನಂಜರಾಜೇ ಅರಸ್ ಅವರು ಗೊನೆಯುಳ್ಳ ಬಾಳೆ ಕಂದು ಕಡಿದ ಬಳಿಕ ಗರ್ಭಗುಡಿ ಬಾಗಿಲನ್ನು ತೆರೆಯಲಾಗಿದ್ದು, ನಾಳೆಯಿಂದ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಹಾಸನ ಮಠದ ಪೀಠಾಧ್ಯಕ್ಷ ಶ್ರೀ ಶಂಭುನಾಥ ಸ್ವಾಮೀಜಿ, ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂದಿನಿಂದ ಅ.23ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಭಾರಿ ಗೋಲ್ಡ್ ಪಾಸ್ ನೀಡಲಾಗಿದ್ದು, ಬೆಳಗ್ಗೆ 7 ರಿಂದ 10 ಗಂಟೆಯೊಳಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಗಣ್ಯರಿಗೆ ದರ್ಶನಕ್ಕೆ ಅವಕಾಶವಿದೆ.
ಕಳೆದ ಬಾರಿ 15 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆ ದೇವಿ ದರ್ಶನ ಮಾಡಿದ್ದರು. ಈ ಬಾರಿ ಸುಮಾರು 25 ಲಕ್ಷರು ಬರುವ ನಿರೀಕ್ಷೆ ಇದೆ. ಈಗಾಗಲೇ ಜಿಲ್ಲಾಡಳಿತ ಹಾಗೂ ದೇವಸ್ಥಾನ ಆಡಳಿತ ಮಂಡಳಿಯಿಂದ ದರ್ಶನಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಗಣ್ಯರಿಗಾಗಿ ವಿಶೇಷ ಸಾಲು, ಟಿಕೆಟ್ ಪಡೆದು ಬರುವವರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ.
ದೇವಿಯ ಭಕ್ತರಿಗಾಗಿ ಆಡಳಿತ ಮಂಡಳಿ ವಾಡ್ಸಾಪ್ ಚಾಟ್ ಮೂಲಕ ಆನ್ ಲೈನ್ ನೆರವು ನೀಡುವ ಯೋಜನೆ ಹಮ್ಮಿಕೊಂಡಿದ್ದು, ಟಿಕೆಟ್ ಬುಕ್ಕಿಂಗ್ ದರ್ಶನ ಸಮಯ ಸರತಿ ಸಾಲುಗಳಿ ಸ್ಥಿತಿಗತಿ, ಇ-ಹುಂಡಿ ಸೇರಿ ಹಲವು ಮಾಹಿತಿಗಳು ಆನ್‌ಲೈನ್ ಮೂಲಕ ಲಭ್ಯವಾಗಲಿದೆ. ಈ ಬಾರಿ ಜಾತ್ರೋತ್ಸವದಲ್ಲಿ ಹೆಲಿ ಟೂರಿಸಂ, ಟೂರ್ ಪ್ಯಾಕೇಜ್, ಶ್ವಾನ ಪ್ರದರ್ಶನ, ಪಾಕ ಸ್ಪರ್ಧೆ, ಜಾನಪದ ಉತ್ಸವ ಆಯೋಜಿಸಲಾಗಿದೆ.