ಹಾಸನ : ಅರಣ್ಯ ಇಲಾಖೆಯಿಂದ ಬರೊಬ್ಬರಿ ಎಂಟು ಗ್ರಾಮಗಳಲ್ಲಿ ಇರುವವರಿಗೆ ಜಮೀನು, ಮನೆ, ಚಿರಾಸ್ತಿ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಸುಮಾರು ಏಳು ಸಾವಿರ ಎಕರೆ ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಿ ನೋಟಿಸ್ ನೀಡಿದೆ.
ಸಕಲೇಶಪುರ ತಾಲ್ಲೂಕಿನ ಮುರ್ಕಣ್ ಗುಡ್ಡ ವ್ಯಾಪ್ತಿಯ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಅರಣ್ಯ ಇಲಾಖೆಯ ಈ ಕ್ರಮಕ್ಕೆ, ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ನೇತೃತ್ವದಲ್ಲಿ ಎಂಟು ಗ್ರಾಮಸ್ಥರು ಸಕಲೇಶಪುರ ತಹಸಿಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
1920 ರಲ್ಲಿ ಮಹಾರಾಜರ ಕಾಲದಲ್ಲಿ ಮೀಸಲು ಅರಣ್ಯ ಘೋಷಣೆ ಮಾಡಿದ್ದರು, ಆದರೆ ಈ ಪ್ರದೇಶದಲ್ಲಿ ಜನವಸತಿ ಇದೆ ಎನ್ನುವ ಕಾರಣಕ್ಕೆ 1924 ರಲ್ಲಿ ಆದೇಶ ರದ್ದು ಮಾಡಲಾಗಿತ್ತು. ಆದರೆ ನೂರು ವರ್ಷಗಳ ಹಿಂದಿನ ಆದೇಶ ಮುಂದಿಟ್ಟುಕೊಂಡು ಜನರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಯತ್ನಿಸುತ್ತಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಮುರ್ಕಣ್ ಗುಡ್ಡ ಪ್ರದೇಶದಲ್ಲಿ ಎರಡು ಮೂರು ಶತಮಾನಗಳಿಂದ ನೂರಾರು ಕುಟುಂಬಗಳು ನೆಲೆಸಿವೆ. ಒಟ್ಟು 7900 ಎಕರೆ ಪ್ರದೇಶದಲ್ಲಿ ಸುಮಾರು 3 ಸಾವಿರ ಎಕರೆ ಪ್ರದೇಶದ ಹಿಡುವಳಿ ಹೊಂದಿರುವೆ. ಈಗ ಏಕಾಏಕಿ ಹಿಡುವಳಿ ಸಾಬೀತು ಮಾಡುವಂತೆ ನೊಟೀಸ್ ನೀಡಿರುವ ಅರಣ್ಯ ಇಲಾಖೆಯ ನಡೆಯಿಂದ ಸಾವಿರಾರು ಕುಟುಂಬಗಳು ಆತಂಕಕ್ಕೆ ಸಿಲುಕಿದೆ.
ಅರಣ್ಯ ಇಲಾಖೆ ದೌರ್ಜನ್ಯವನ್ನು ತಡೆಯುವಂತೆ ಒತ್ತಾಯಿಸಿ ತಹಸಿಲ್ದಾರ್ ಹಾಗೂ ಸಕಲೇಶಪುರ ಶಾಸಕ ಸಿಮೆಂಟ್ ಮಂಜುಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.



















