ಹಾಸನ: ಹಾಸನ ತಾಲ್ಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಸರಕು ಲಾರಿ ನುಗ್ಗಿದ್ದು, ಕನಿಷ್ಠ 9 ಜನರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಸಾಗುತ್ತಿತ್ತು. ಹೆದ್ದಾರಿಯಲ್ಲಿ ಸಾಗುತ್ತಿದ್ದ ಕ್ಯಾಂಟರ್ ಲಾರಿಗೆ ಬೈಕ್ ಅಡ್ಡ ಬಂದಿದೆ.
ಇದನ್ನು ತಪ್ಪಿಸಲು ಕ್ಯಾಂಟರ್ ಚಾಲಕ ಯತ್ನಿಸಿದ್ದಾನೆ. ಈ ವೇಳೆ ರಸ್ತೆ ವಿಭಜಕ ದಾಟಿದ ಕ್ಯಾಂಟರ್ ಲಾರಿ ಮೆರವಣಿಗೆ ಮೇಲೆ ಎರಗಿದೆ. ಈ ವೇಳೆ ಸ್ಥಳದಲ್ಲಿದ್ದ 9 ಜನರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಮೃತರಾದ ವಿವರವನ್ನು ಸರ್ಕಾರ ಹಂಚಿಕೊಂಡಿದೆ.