ಬೆಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಕೋಗಿಲು ಲೇಔಟ್ ನಿರಾಶ್ರಿತರ ಮನೆ ಹಂಚಿಕೆ ವಿಚಾರಕ್ಕೆ ಲಾಜಿಕಲ್ ಎಂಡ್ ಸಿಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಕೋಗಿಲು ಲೇಔಟ್‌ನ ನಿರಾಶ್ರಿತರಿಗೆ ಹೊಸ ವರ್ಷದಲ್ಲೇ ಮನೆ ನೀಡಲಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ ಫೆಬ್ರವರಿ ಅಂತ್ಯ ಸಮೀಪಿಸಿದರೂ ಮನೆ ಹಂಚಿಕೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.
ಸುಮಾರು 245 ಮಂದಿ ಮನೆಗಾಗಿ ಅರ್ಜಿ ಸಲ್ಲಿಸಿದ್ದರೆ, ಮೊದಲ ಹಂತದಲ್ಲಿ 26 ಅರ್ಜಿಗಳನ್ನು ಅಂತಿಮಗೊಳಿಸಲಾಗಿತ್ತು. ಆದರೆ ಈಗ ಆ 26 ಅರ್ಜಿಗಳಲ್ಲೂ ಯಾರಿಗೂ ಅಂತಿಮ ಅನುಮೋದನೆ ಸಿಕ್ಕಿಲ್ಲವೆಂದು ತಿಳಿದುಬಂದಿದೆ.
ಲಭ್ಯ ಮಾಹಿತಿಯ ಪ್ರಕಾರ, ಮನೆ ಪಡೆಯಲು ಅರ್ಹತೆ ಮಾನದಂಡಗಳು ಹಾಗೂ ಕಾನೂನು ತೊಡಕುಗಳು ಅಡ್ಡಿಯಾಗಿವೆ. ಒಬ್ಬರಿಗೆ ಮನೆ ನೀಡಿದರೆ ಮುಂದಿನ ದಿನಗಳಲ್ಲಿ ಕಾನೂನು ಸಮಸ್ಯೆಗಳು ಎದುರಾಗಬಹುದು ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಕಡತವು ರಾಜೀವ್ ಗಾಂಧಿ ವಸತಿ ಯೋಜನೆ ಕಚೇರಿಯಲ್ಲೇ ಸೀಮಿತವಾಗಿದ್ದು, ಪೊಲೀಸ್ ವರಿಫಿಕೇಶನ್ ನೆಪದಲ್ಲಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳು ‘ಅಲ್ಲಿ ಯಾರೂ ಅರ್ಹರಲ್ಲ, ಮನೆ ಹಂಚಿಕೆ ಮಾಡಿದರೆ ಕಾನೂನು ತೊಡಕು ಉಂಟಾಗಬಹುದು’ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ರಾಜಕಾರಣಿಗಳ ಭರವಸೆ ಮಾತಿಗೆ ಅಧಿಕಾರಿಗಳ ಕಾನೂನು ನಿಯಮಗಳ ಪಾಠ ಅಡ್ಡಿಯಾಗಿರುವುದರಿಂದ, ಕೋಗಿಲು ಲೇಔಟ್ ನಿರಾಶ್ರಿತರಿಗೆ ಮನೆ ಸಿಗುವುದು ಇನ್ನೂ ಅನುಮಾನದಲ್ಲೇ ಉಳಿದಿದೆ.
ಮತ್ತೊಂದು ಕಡೆ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ₹50,000 ಮುಂಗಡ ಹಣವನ್ನು ಪಾವತಿಸಬೇಕು ಎಂಬ ನಿಯಮವಿದೆ. ಆದರೆ ಇದುವರೆಗೆ ಕೋಗಿಲು ಲೇಔಟ್‌ನ ನಿರಾಶ್ರಿತರಿಂದ ಯಾರೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿಲ್ಲವೆಂದು ತಿಳಿದುಬಂದಿದೆ.
ನಿಯಮಾನುಸಾರ ಅರ್ಜಿ ಸಲ್ಲಿಸಿ ಅಗತ್ಯ ಮಾನದಂಡಗಳನ್ನು ಪೂರೈಸಿದರೆ ಮಾತ್ರ ಮನೆ ಮಂಜೂರು ಸಾಧ್ಯ. ಆದರೆ ಲಭ್ಯ ಮಾಹಿತಿಯ ಪ್ರಕಾರ, ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ ಅಲ್ಲಿ ಯಾರೂ ಮನೆ ಪಡೆಯಲು ಅರ್ಹರಾಗುವುದಿಲ್ಲ ಎಂಬ ಅಭಿಪ್ರಾಯ ಅಧಿಕಾರಿಗಳಿಂದ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೋಗಿಲು ಲೇಔಟ್ ನಿರಾಶ್ರಿತರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಸೂರು ಸಿಗುವ ಸಾಧ್ಯತೆ ಕ್ಷೀಣಿಸಿದೆ. ಮನೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದವರಿಗೆ ಇದು ಬಿಗ್ ಶಾಕ್ ಆಗಿದೆ.
ಕಾನೂನು ತೊಡಕುಗಳನ್ನು ಮುಂದಿಟ್ಟುಕೊಂಡು ಮನೆ ಹಂಚಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವರಾ ಎಂಬ ಪ್ರಶ್ನೆ ಉದ್ಭವಿಸಿದೆ. “ಇಲ್ಲಿ ಒಬ್ಬರಿಗೆ ಮನೆ ನೀಡಿದರೆ ರಾಜ್ಯದ ಇತರ ಭಾಗಗಳಲ್ಲಿಯೂ ಇದೇ ರೀತಿಯ ಬೇಡಿಕೆಗಳು ಬರುತ್ತವೆ” ಎಂಬ ಆತಂಕವೂ ಅಧಿಕಾರಿಗಳ ವಲಯದಲ್ಲಿ ವ್ಯಕ್ತವಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಕೋಗಿಲು ಲೇಔಟ್ ನಿರಾಶ್ರಿತರ ಮನೆ ಕನಸು ಇನ್ನೂ ಅನಿಶ್ಚಿತತೆಯಲ್ಲೇ ಉಳಿದಿದೆ.
ಇದನ್ನೂ ಓದಿ : KMFನಿಂದ ಸಾರ್ವಜನಿಕ ಪ್ರಕಟಣೆ | ಸುಳ್ಳು ಸುದ್ದಿ ಹರಡುವವರಿಗೆ ಖಡಕ್ ಎಚ್ಚರಿಕೆ



















