ಬೆಂಗಳೂರು: ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರ (State Government) ಮತ್ತೆ ಹಿಂದೇಟು ಹಾಕುತ್ತಿದೆ ಎಂಬ ಆಕ್ರೋಶ ಕೇಳಿ ಬರುತ್ತಿದೆ.
ಇತ್ತೀಚೆಗೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರಕ್ಕೆ(protest) ಮುಂದಾಗಿದ್ದರು. ಈ ವೇಳೆ ರಾಜ್ಯ ಸರ್ಕಾರ ಮುಷ್ಕರ ನಡೆಯದಂತೆ ತಡೆದಿತ್ತು. ಅಲ್ಲದೇ, ಬೇಡಿಕೆ ಈಡೇರಿಕೆಗಾಗಿ ಸಂಕ್ರಾಂತಿ ನಂತರ ಸಭೆ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ, ದಿನಗಳು ಉರುಳಿದರೂ ಸಭೆಗೆ ಮಾತ್ರ ಸರ್ಕಾರ ಮುಂದಾಗುತ್ತಿಲ್ಲ ಎಂದು ಸಾರಿಗೆ ನೌಕರರು(Transport employees) ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೇಡಿಕೆ ಈಡೇರಿಸಲು ಮನಸ್ಸು ಮಾಡದ ಸರ್ಕಾರದ ವಿರುದ್ದ ಸಾರಿಗೆ ನೌಕರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ವೇತನ ಸೇರಿದಂತೆ ಇನ್ನಿತರ ಹಲವು ಬೇಡಿಕೆ ಈಡೇರಿಕೆಗೆ ಡಿ. 31ರಿಂದ ಮುಷ್ಕರಕ್ಕೆ ನೌಕರರು ಮುಂದಾಗಿದ್ದರು. ಈ ವೇಳೆ ನೌಕರರ ಸಂಘಟನೆಗಳ ಜತೆ ಸಭೆ ಮಾಡಿ ಬೇಡಿಕೆ ಈಡೇರಿಸುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ, ಸಂಕ್ರಾಂತಿ ಮುಗಿದು ಹಲವು ದಿನ ಕಳೆದರೂ ನೌಕರರರ ಬೇಡಿಕೆಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ.
ಹೀಗಾಗಿ ಸರ್ಕಾರದ ವಿರುದ್ಧ ಮತ್ತೆ ಬೀದಿಗೆ ಇಳಿಯಲು ಸಾರಿಗೆ ನೌಕರರ ಸಂಘಟನೆಗಳು ಮುಂದಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಭೆ ನಿಗದಿ ಪಡಿಸಿ ನೌಕರರ ಬೇಡಿಕೆ ಈಡೇರಿಸುವಂತೆ ಜಂಟಿ ಕ್ರಿಯಾ ಸಮಿತಿ ಮನವಿ ಮಾಡಿದೆ.