ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದೆ. ಈ ಮಧ್ಯೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಹರಿಯಾಣ ಬಿಜೆಪಿ 1 ಕೆಜಿ ಜಿಲೇಬಿಯನ್ನು ಕಳುಹಿಸಿದೆ.
ಹರಿಯಾಣದಲ್ಲಿ ಭಾರತೀಯ ಜನತಾ ಪಕ್ಷದ ಎಲ್ಲಾ ಕಾರ್ಯಕರ್ತರ ಪರವಾಗಿ ರಾಹುಲ್ ಗಾಂಧಿ ಮನೆಗೆ ಜಿಲೇಬಿ ಕಳುಹಿಸಲಾಗಿದೆ ಎಂದು ಬಿಜೆಪಿಯು ಸಾಮಾಜಿಕ ಜಾಲತಾಣದ ಮೂಲಕ ಹೇಳಿದೆ.
ದೆಹಲಿ ಮೂಲದ ಫುಡ್ ಡೆಲಿವರಿ ಆ್ಯಪ್ ಆದ ಸ್ವಿಗ್ಗಿಯ ಅಪ್ಲಿಕೇಶನ್‌ನ ಸ್ಕ್ರೀನ್ ಶಾಟ್ ಅನ್ನು ಎಕ್ಸ್ ನಲ್ಲಿ ಲಗತ್ತಿಸಿ ಹೇಳಲಾಗಿದೆ. ರಾಹುಲ್ ಗಾಂಧಿಗೆ ಸ್ವಿಗ್ಗಿಯಲ್ಲಿ ಜಿಲೇಬಿ ಕಳುಹಿಸಲಾಗಿದ್ದು, ಕ್ಯಾಶ್ ಆನ್ ಡೆಲಿವರಿ ಆಯ್ಕೆ ನೀಡಲಾಗಿದೆ. ಹೀಗಾಗಿ ರಾಹುಲ್ ಗಾಂಧಿ ಹಣ ಪಾವತಿಸಿ ಈ ಜಿಲೇಬಿ ಬಾಕ್ಸ್ ಪಡೆಯಬೇಕಾಗುತ್ತದೆ.
ಹರಿಯಾಣ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರು ಹರಿಯಾಣ ಜಿಲೇಬಿಯನ್ನು ಜನ ತುಂಬಾ ಇಷ್ಟ ಪಡುತ್ತಾರೆ. ಇಲ್ಲಿಯ ಜಿಲೇಬಿ ತುಂಬಾ ಸ್ವಾದಿಷ್ಟವಾಗಿರುತ್ತದೆ. ದೇಶಾದ್ಯಂತ ಬೃಹತ್ ಪ್ರಮಾಣದಲ್ಲಿ ತಯಾರಿಸಿ ಮಾರಾಟ ಮಾಡುವುದರ ಜೊತೆಗೆ ಉದ್ಯೋಗ ಮತ್ತು ಆದಾಯವನ್ನು ಸೃಷ್ಟಿಸಲು ರಫ್ತು ಮಾಡಲಾಗುತ್ತಿದೆ ಎಂದು ಹೇಳಿದ್ದರು. ಆದರೆ, ಬಿಜೆಪಿಯ ಹಲವು ನಿಯಮಗಳಿಂದಾಗಿ ಜಿಲೇಬಿ ವ್ಯಾಪಾರಸ್ಥರು ನಷ್ಟದಲ್ಲಿದ್ದಾರೆ. ಮೋದಿ ಜಿಲೇಬಿ ತಯಾರಿಕೆಗೆ ಕಂಪನಿ ಆರಂಭಿಸಲು ಹಣ ನೀಡುವುದಿಲ್ಲ ಎಂದಿದ್ದರು.
ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತಿದ್ದಂತೆ ಬಿಜೆಪಿಯು ಜಿಲೇಬಿಯನ್ನೇ ಅಸ್ತ್ರವಾಗಿ ಬಳಕೆ ಮಾಡಿದೆ. ಆರಂಭದಲ್ಲಿ ಕಾಂಗ್ರೆಸ್ ಮುಂದೆ ಇದ್ದಾಗ ಕಾಂಗ್ರೆಸ್ ಕಾರ್ಯಕರ್ತರು ಜಿಲೇಬಿ ಸವಿಯಲು ಆರಂಭಿಸಿದ್ದರು. ಇದು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆನಂತರ ಬಿಜೆಪಿ ಗೆಲುವಿನ ಹಾದಿ ಹಿಡಿಯುತ್ತಿದ್ದಂತೆ ಬಿಜೆಪಿ ಅಣಕವಾಡಲು ಆರಂಭಿಸಿತು. ಈಗ ಜಿಲೇಬಿಯನ್ನು ರಾಹುಲ್ ಅವರಿಗೆ ಕಳುಹಿಸಲಾಗಿದೆ.