ಬೆಂಗಳೂರು: ಇತ್ತೀಚೆಗೆ ಅಗತ್ಯ ವಸ್ತುಗಳಲ್ಲಿ ಹಾನಿಕಾರಕ ಅಂಶ ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಈಗ ಆ ಸಾಲಿಗೆ ಮಿನಿರಲ್ ವಾಟರ್ (Water) ಬಂದು ನಿಂತಿದೆ. ಬೆಂಗಳೂರಿನಂತಹ (Bengaluru) ಮಹಾನಗರಗಳಲ್ಲಿ ಕುಡಿಯುವ ನೀರು ವಿಷವಾಗುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಮಿನರಲ್ ವಾಟರ್ ಬಾಟಲ್ ಗಳಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿರುವುದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ (Food Safety Department) ವರದಿಯಿಂದ ತಿಳಿದು ಬಂದಿದೆ. ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಸುಮಾರು 160 ಮಿನರಲ್ ವಾಟರ್ ಬಾಟಲ್ ಗಳನ್ನು (Mineral Water Bottle) ಇತ್ತೀಚೆಗೆ ಟೆಸ್ಟ್ ಗೆ ಒಳಪಡಿಸಿದ್ದರು.
ಈ ಪೈಕಿ ಈಗಾಗಲೇ 100ಕ್ಕೂ ಅಧಿಕ ಬಾಟಲ್‌ಗಳ ವರದಿ ಕೈಸೇರಿದೆ. ಇಲಾಖೆ ಕಳುಹಿಸಿದ್ದ ಮಾದರಿಗಳಲ್ಲಿ ಶೇ. 50ರಷ್ಟು ನೀರು ಕುಡಿಯಲು ಯೋಗ್ಯವಲ್ಲ ಎಂಬುವುದನ್ನು ವರದಿ ಸಾರಿದೆ. ಲೋಕಲ್ ಮಿನರಲ್ ವಾಟರ್ ಕುಡಿಯಲು ಯೋಗ್ಯವಲ್ಲ ಎಂಬುವುದನ್ನು ಈ ವರದಿ ತಿಳಿಸಿದೆ.
ಮಿನರಲ್ ವಾಟರ್ ಬಾಟಲ್ ವರದಿಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ತುಂಬಾ ಸಮಯದಿಂದ ನೀರು ಶೇಖರಣೆ ಮಾಡುವುದರಿಂದ ಪಾಚಿ ಅಂಶಗಳು ಕಂಡು ಬಂದಿವೆ. ಕೆಲ ಕಂಪನಿಗಳು ಕಲುಷಿತ ನೀರು, ಬೋರ್ ವೆಲ್ ನೀರನ್ನು ಬಾಟಲ್ ಮೂಲಕ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಹೀಗಾಗಿ ನೀರಿನಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿದೆ ಎನ್ನಲಾಗಿದೆ. ಈ ನೀರು ಕುಡಿಯುವುದರಿಂದಾಗಿ ವಾಂತಿ, ಭೇದಿ, ಜ್ವರ, ಸುಸ್ತು ಕಾಣಿಸಿಕೊಳ್ಳುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ.