ನವದೆಹಲಿ | ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದ ದಾಖಲೆಗಳು ಸದ್ಯಕ್ಕೆ ಮುರಿಯಲು ಸಾಧ್ಯವಿಲ್ಲದಂತಿದ್ದು, ಅವರು ಇನ್ನೂ ನಾಲ್ಕರಿಂದ ಐದು ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರಲಿದ್ದಾರೆ ಎಂದು ಭಾರತದ ದಿಗ್ಗಜ ವೇಗಿ ಜೂಲನ್ ಗೋಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗಷ್ಟೇ ತವರಿನಲ್ಲಿ ನಡೆದ ಚೊಚ್ಚಲ ವಿಶ್ವಕಪ್ ಗೆಲುವಿನ ಮೂಲಕ ಹರ್ಮನ್‌ಪ್ರೀತ್ ಇತಿಹಾಸ ನಿರ್ಮಿಸಿದ್ದರು. ಅಲ್ಲದೆ, ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (ಡಬ್ಲ್ಯುಪಿಎಲ್) ಮುಂಬೈ ಇಂಡಿಯನ್ಸ್ (MI) ತಂಡಕ್ಕೆ ಎರಡು ಬಾರಿ ಪ್ರಶಸ್ತಿ ತಂದುಕೊಡುವ ಮೂಲಕ ಲೀಗ್‌ನ ಅತ್ಯಂತ ಯಶಸ್ವಿ ನಾಯಕಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಮತ್ತು ಮೆಂಟರ್ ಕೂಡ ಆಗಿರುವ ಜೂಲನ್ ಗೋಸ್ವಾಮಿ ತಮ್ಮ ನಾಯಕಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದ್ಭುತ ಸಾಧನೆ |
“ಭಾರತೀಯ ಕ್ರಿಕೆಟ್ ಮತ್ತು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಹರ್ಮನ್‌ಪ್ರೀತ್ ಮಾಡಿರುವ ಸಾಧನೆ ಅದ್ಭುತವಾಗಿದೆ. ಸದ್ಯದ ಮಟ್ಟಿಗೆ ಯಾರೂ ಅವರ ದಾಖಲೆಯನ್ನು ಮುಟ್ಟಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಚೊಚ್ಚಲ ವಿಶ್ವಕಪ್ ವಿಜೇತ ನಾಯಕಿ ಮತ್ತು ಎರಡು ಡಬ್ಲ್ಯುಪಿಎಲ್ ಪ್ರಶಸ್ತಿಗಳನ್ನು ಗೆದ್ದಿರುವ ಅವರ ದಾಖಲೆ ಅಸಾಧಾರಣ,” ಎಂದು ಜೂಲನ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಭವಿಷ್ಯದಲ್ಲಿ ಅವರು ನಿರ್ಮಿಸಲಿರುವ ಪರಂಪರೆಯನ್ನು ಈಗಲೇ ವಿವರಿಸುವುದು ಕಷ್ಟ, ಏಕೆಂದರೆ ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಬಾಕಿ ಇದೆ ಎಂದು ಜೂಲನ್ ಹೇಳಿದ್ದಾರೆ.
ಭಾವನಾತ್ಮಕ ಕ್ಷಣ |
ಇತ್ತೀಚೆಗೆ ಟೀಂ ಇಂಡಿಯಾ ವಿಶ್ವಕಪ್ ಗೆದ್ದಾಗ ಮಾಜಿ ಆಟಗಾರರಾದ ಮಿಥಾಲಿ ರಾಜ್, ಅಂಜುಮ್ ಚೋಪ್ರಾ, ರೀಮಾ ಮಲ್ಹೋತ್ರಾ ಮತ್ತು ತಮ್ಮೊಂದಿಗೆ ಸಂಭ್ರಮ ಹಂಚಿಕೊಂಡ ಕ್ಷಣವನ್ನು ಜೂಲನ್ ಸ್ಮರಿಸಿಕೊಂಡರು. “ಅದು ಪೂರ್ವನಿಯೋಜಿತವಾಗಿರಲಿಲ್ಲ. ನಾವು ಪ್ರಸಾರಕ ಕರ್ತವ್ಯದಲ್ಲಿದ್ದೆವು. ಆದರೆ ಹರ್ಮನ್, ಸ್ಮೃತಿ ಮಂಧಾನ ಮತ್ತು ಇಡೀ ತಂಡ ನಮ್ಮ ಬಳಿ ಬಂದು ಆ ಸಂಭ್ರಮವನ್ನು ಹಂಚಿಕೊಂಡ ರೀತಿ ಭಾರತೀಯ ಕ್ರೀಡಾ ಇತಿಹಾಸದಲ್ಲೇ ಕಂಡಿರದಂತಹ ಅಪರೂಪದ ಕ್ಷಣವಾಗಿತ್ತು,” ಎಂದು ಅವರು ಭಾವುಕರಾದರು.
ಡಬ್ಲ್ಯುಪಿಎಲ್ ಕಾವು |
ಜನವರಿ 9ರಿಂದ ನಾಲ್ಕನೇ ಆವೃತ್ತಿಯ ಡಬ್ಲ್ಯುಪಿಎಲ್ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಮುಂಬೈ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಹೆಚ್ಚಿನ ಆಟಗಾರರನ್ನು ಉಳಿಸಿಕೊಂಡಿರುವುದು ಮುಂಬೈ ತಂಡದ ಬಲವನ್ನು ಹೆಚ್ಚಿಸಿದೆ ಎಂದು ಜೂಲನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ‘ಏನಪ್ಪಾ ಇದು?’ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಕಂಡು ದಂಗಾದ ಅಶ್ವಿನ್ | 14ರ ಹರೆಯದ ಬಾಲಕನ ಆಟಕ್ಕೆ ಫಿದಾ



















