ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರ ವೈಯಕ್ತಿಕ ಜೀವನ ಮತ್ತೆ ಸುದ್ದಿಯಲ್ಲಿದೆ. ನಟಿ ನತಾಶಾ ಸ್ಟ್ಯಾನ್‌ಕೋವಿಕ್ ಅವರಿಂದ ವಿಚ್ಛೇದನ ಪಡೆದ ನಂತರ, ಹಾರ್ದಿಕ್ ಈಗ ಹೊಸ ಗೆಳತಿ, ಮಾಡೆಲ್ ಮಹಿಕಾ ಶರ್ಮಾ (Mahieka Sharma) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಹಾರ್ದಿಕ್ ಹಂಚಿಕೊಂಡಿರುವ ಇತ್ತೀಚಿನ ಫೋಟೋವೊಂದರಲ್ಲಿ ಮಹಿಕಾ ಬೆರಳಲ್ಲಿ ಬೃಹತ್ ವಜ್ರದ ಉಂಗುರ ಮಿಂಚುತ್ತಿದೆ!
ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ “My Big 3” (ನನ್ನ ಪ್ರಮುಖ ಮೂವರು) ಎಂಬ ಶೀರ್ಷಿಕೆಯೊಂದಿಗೆ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಮಗ ಅಗಸ್ತ್ಯ, ಕ್ರಿಕೆಟ್ ಮತ್ತು ಗೆಳತಿ ಮಹಿಕಾ ಶರ್ಮಾ ಇದ್ದಾರೆ. ಆದರೆ, ನೆಟ್ಟಿಗರ ಕಣ್ಣು ನೆಟ್ಟಿದ್ದು ಮಹಿಕಾ ಅವರ ಎಡಗೈ ಬೆರಳಿನಲ್ಲಿದ್ದ ಉಂಗುರದ ಮೇಲೆ. ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸುತ್ತಿದ್ದ ಈ ಜೋಡಿ, ಮನೆಯಲ್ಲಿ ಪೂಜೆ ಸಲ್ಲಿಸುತ್ತಿರುವ ಮತ್ತು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋಗಳು ಅಭಿಮಾನಿಗಳ ಕುತೂಹಲ ಕೆರಳಿಸಿವೆ. “ಇದು ಅಧಿಕೃತವೇ? ಹಾರ್ದಿಕ್ ಮತ್ತೆ ಎಂಗೇಜ್ ಆದರೆ?” ಎಂಬ ಪ್ರಶ್ನೆಗಳು ಕಮೆಂಟ್ ಬಾಕ್ಸ್‌ನಲ್ಲಿ ಹರಿದಾಡುತ್ತಿವೆ.
ಸಾರ್ವಜನಿಕವಾದ ಸಂಬಂಧ
ಹಾರ್ದಿಕ್ ಮತ್ತು ಮಹಿಕಾ ಶರ್ಮಾ ಅವರ ಸಂಬಂಧ ಗುಟ್ಟಾಗಿ ಉಳಿದಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಸಾರ್ವಜನಿಕಗೊಳಿಸಿದ್ದರು. ಮಹಿಕಾ (24) ವೃತ್ತಿಯಲ್ಲಿ ಮಾಡೆಲ್ ಆಗಿದ್ದು, ಹಾರ್ದಿಕ್ ಅವರಿಗಿಂತ 8 ವರ್ಷ ಚಿಕ್ಕವರು. ನತಾಶಾ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದ ಕೆಲವೇ ತಿಂಗಳುಗಳಲ್ಲಿ ಹಾರ್ದಿಕ್, ಮಹಿಕಾ ಜೊತೆಗಿನ ಒಡನಾಟವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ.
ನತಾಶಾ ಜೊತೆಗಿನ ವಿಚ್ಛೇದನ ಮತ್ತು ಗರ್ಭಧಾರಣೆಯ ವದಂತಿ
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟ್ಯಾನ್‌ಕೋವಿಕ್ ಜುಲೈ 2024ರಲ್ಲಿ ತಮ್ಮ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ಮಗ ಅಗಸ್ತ್ಯನ ಪಾಲನೆ ಜವಾಬ್ದಾರಿಯನ್ನು ಇಬ್ಬರೂ ಹಂಚಿಕೊಂಡಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ನತಾಶಾ ಅವರನ್ನು ಮದುವೆಯಾದ ಸಂದರ್ಭದಲ್ಲಿಯೂ ಅವರು ಗರ್ಭಿಣಿಯಾಗಿದ್ದರು ಎಂಬ ಸುದ್ದಿ ಹಬ್ಬಿತ್ತು. ಈಗ ಮಹಿಕಾ ಜೊತೆಗಿನ ನಿಶ್ಚಿತಾರ್ಥದ ವದಂತಿಯ ಬೆನ್ನಲ್ಲೇ, ಇದೇ ರೀತಿಯ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ತೇಲುತ್ತಿವೆ. ಆದರೆ, ಇದಕ್ಕೆ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ.
ದಕ್ಷಿಣ ಆಫ್ರಿಕಾ ಸರಣಿಗೆ ಡೌಟ್?
ಮೈದಾನದಾಚೆಗಿನ ಬದುಕು ರಂಗೇರಿದ್ದರೂ, ಹಾರ್ದಿಕ್ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಸಣ್ಣ ಆತಂಕವಿದೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಅವರು, ನವೆಂಬರ್ 30ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಬಿಸಿಸಿಐ ಆಯ್ಕೆ ಸಮಿತಿ ಇವರ ಸ್ಥಾನಕ್ಕೆ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಒಟ್ಟಿನಲ್ಲಿ, ಮೈದಾನದಲ್ಲಿ ಸಿಕ್ಸರ್ ಸಿಡಿಸುವ ಹಾರ್ದಿಕ್, ಪ್ರೀತಿಯ ಪಿಚ್‌ನಲ್ಲೂ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆಯೇ ಎಂಬುದು ಸದ್ಯದ ಹಾಟ್ ಟಾಪಿಕ್!
ಇದನ್ನೂ ಓದಿ: ಮೈದಾನದಲ್ಲಿ ಸಿಕ್ಸರ್, ಈಗ ಪ್ರೀತಿಯಲ್ಲಿ ಕ್ಲೀನ್ ಬೋಲ್ಡ್ ; ವೈರಲ್ ರೀಲ್ ಮೂಲಕ ನಿಶ್ಚಿತಾರ್ಥ ಖಚಿತಪಡಿಸಿದ ಸ್ಮೃತಿ ಮಂಧಾನ!



















