ಬೆಂಗಳೂರು: ಇತ್ತೀಚೆಗೆ ಗುರು ಪರಂಪರೆ ಹಳಸಿ ಹೋಗುತ್ತಿದೆ ಎಂಬ ಆತಂಕ ಕೇಳಿ ಬರುತ್ತಿದೆ. ಶಿಕ್ಷಕರು ಮಕ್ಕಳಿಗೆ ಬೈದು ಬುದ್ಧಿ ಹೇಳುವ ಕಾಲವೂ ಹೋಗಿದೆ. ಹೀಗಾಗಿ ಶಿಕ್ಷಕರ ಭಯ ಇಲ್ಲದ ಹಲವಾರು ಮಕ್ಕಳು, ಗುರುಗಳನ್ನೇ ಅವಮಾನಿಸುತ್ತಿರುವ ಹಲವಾರು ಘಟನೆಗಳನ್ನು ನೋಡಿರುತ್ತೇವೆ. ಈಗ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ.
ವಿದ್ಯಾರ್ಥಿಗಳೇ ಶಿಕ್ಷಕರಿಗೆ ಕಿರುಕುಳ ನೀಡುತ್ತಿದ್ದಾರೆಂದು ಶಾಲೆಗಳಲ್ಲಿ ಕನಿಷ್ಠ ಶಿಸ್ತು ಕ್ರಮದ ನಿಯಮಗಳ ಜಾರಿಗೆ ತರಬೇಕು. ವಿದ್ಯಾರ್ಥಿಗಳ ನಿಯಂತ್ರಣಕ್ಕೆ ಕನಿಷ್ಠ ನಿಯಮಗಳನ್ನು, ಮಾನದಂಡ ಜಾರಿಯಾಗಬೇಕು ಎಂದು ಖಾಸಗಿ ಶಾಲೆಗಳ ಸಂಘಟನೆ ಸಿಎಂಗೆ ಪತ್ರ ಬರೆದು ಮನವಿ ಮಾಡಿದೆ.
ವಿದ್ಯಾರ್ಥಿಗಳ ದುವರ್ತನೆ, ಶಿಕ್ಷಕರಿಗೆ ಕಿರುಕುಳ, ಅಪಮಾನ ಮಾಡುವುದು, ಅಶ್ಲೀಲವಾಗಿ ಮಾತನಾಡುವುದು ಹಾಗೂ ಹಲ್ಲೆ ಮಾಡಿರುವ ಕುರಿತು ದೂರು ನೀಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಈ ದುರ್ವರ್ತನೆಗೆ ಬ್ರೇಕ್ ಹಾಕಲು ಕನಿಷ್ಠ ನಿಯಮ ಜಾರಿ ಮಾಡುವಂತೆ ಸರ್ಕಾರಕ್ಕೆ ಖಾಸಗಿ ಶಾಲೆಗಳ ಸಂಘ ಮನವಿ ಮಾಡಿದೆ.
ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಶೋಷಣೆಗೆ ಒಳಗಾಗುತ್ತಿದ್ದಾರೆ. ವಿದ್ಯಾರ್ಥಿಗಳು ಸಾಕಷ್ಟು ಕಿರುಕುಳ ನೀಡುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಶಿಕ್ಷಕರಿಗೆ, ಶಾಲಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದಾರೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮನವಿ ಮಾಡಿವೆ ಎಂದು ಕ್ಯಾಮ್ಸ್ ಖಾಸಗಿ ಶಾಲೆಗಳ ಸಂಘಟನೆ ಸಿಎಂಗೆ ಬರೆದ ಪತ್ರದಲ್ಲಿ ಮನವಿ ಮಾಡಿದೆ.