ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಗೂರಿನ ವೀರ ಹನುಮಾನ್ ದೇವಸ್ಥಾನ ಹಾಗೂ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ರಾಮನವಮಿಯ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅರ್ಚಕರ ನೇತೃತ್ವದಲ್ಲಿ ನಡೆದವು. ಕಳೆದ ಕೆಲವು ದಿನಗಳಿಂದಲೂ ದೇವಸ್ಥಾನಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು.
ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮಿಜಿ ಪರಮಾನುಗ್ರಹ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾರೈಕೆಯೊಂದಿಗೆ ವಿವಿಧ ಕಾರ್ಯಕ್ರಮಗಳು ನಡೆದವು ಎಂದು ಸಂಘಟಕರು ಹೇಳಿದ್ದಾರೆ.
ಜೀರ್ಣ ಅಷ್ಟಬಂಧ ಬ್ರಹ್ಮಕಲಶ ಮತ್ತು 1008 ಕಲಶಾಭಿಷೇಕ ಮಹೋತ್ಸವ ನಡೆದವು. ಹನುಮ ಜಯಂತಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನೆಡೆಯಿತು. ಈ ವರ್ಷ ದಾನಿಗಳ ಸಹಾಯದಿಂದ ದೇವಾಲಯ ಸುತ್ತಲೂ ಕಂಗೊಳಿಸುತ್ತಿರುವ ಪೇಂಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ದಾನಿಗಳನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆದವು.
ಈ ವೇಳೆ ಶ್ರೀಕ್ಷೇತ್ರ ನಾಗೂರು ಧರ್ಮದರ್ಶಿ ಎಸ್. ಗಿರಿ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಣು ಡಿ.ಚಂದನ್, ಉಪಾಧ್ಯಕ್ಷ ರತ್ನಾಕರ್ ಪೂಜಾರಿ, ಪ್ರಧಾನ ಅರ್ಚಕ ಗಣಪತಿ ಭಟ್, ಸದಸ್ಯ ರವೀಂದ್ರ ದೇವಾಡಿಗ, ಗೌರವಾಧ್ಯಕ್ಷ ಕೃಷ್ಣ ಎಂ. ಕುಂದರ್, ಕಾರ್ಯದರ್ಶಿ ಸಂತೋಷ್ ಆಚಾರ್ಯ, ಕಾರ್ಯದರ್ಶಿ ಗಣೇಶ್ ಪೂಜಾರಿ, ಸಹಾಯಕ ಅರ್ಚಕ ಸುಬ್ರಹ್ಮಣ್ಯ ಕಾರಂತ್, ಲೆಕ್ಕ ಪರಿಶೋಧಕ ಹೆಚ್. ರಾಜಕುಮಾರ್ ಶೆಟ್ಟಿ, ಗೌರವಾಧ್ಯಕ್ಷ ಹೆಚ್. ರಾಮಚಂದ್ರ, ಕೋಶಾಧಿಕಾರಿ ಹರೀಶ್ ಕುಮಾರ್, ಜಂಟಿ ಕೋಶಾಧಿಕಾರಿ ನಿತ್ಯಾನಂದ ನ್ಯಾರಿ, ಶನೇಶ್ವರ ಸ್ವಾಮಿ ಅರ್ಚಕ ನಾರಾಯಣ್ ಎಂ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.