ಬೆಂಗಳೂರು: ಕಾರು ಅಥವಾ ಬೈಕ್ ಖರೀದಿಸಿ 8-10 ವರ್ಷ ಆಗಿರುತ್ತದೆ. ಈಗಿರುವ ವಾಹನವನ್ನು ಮಾರಾಟ ಮಾಡಿ, ಇನ್ನೊಂದಿಷ್ಟು ದುಡ್ಡು ಹೊಂದಿಸಿ ಹೊಸ ವಾಹನ ಖರೀದಿಸಬೇಕು ಎಂದು ಬಯಸುತ್ತೀರಿ. ಹೇಗೂ ಹಳೆಯ ಕಾರು ಅಥವಾ ಬೈಕ್ ಮಾರಾಟ ಮಾಡಲು ಒಂದಷ್ಟು ವೆಬ್ ಸೈಟ್ ಗಳಿವೆ. ಸೋಷಿಯಲ್ ಮೀಡಿಯಾಗಳ ಪೋಸ್ಟ್ ಮೂಲಕವೂ ಮಾರಾಟ ಮಾಡುವವರಿದ್ದಾರೆ. ಆದರೆ, ನಿಮ್ಮ ಹಳೆಯ ವಾಹನವನ್ನು ಬೇರೆಯವರಿಗೆ ಮಾರಾಟ ಮಾಡುವ ಮುನ್ನ ಒಂದಷ್ಟು ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ.
ಹೌದು, ನೀವು ವಾಹನ ಮಾರಾಟ ಮಾಡಿದ ಬಳಿಕ ಮೊದಲು ಫಾರ್ಮ್ 29ಅನ್ನು ಭರ್ತಿ ಮಾಡಿ ಆರ್ ಟಿ ಒ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ವಾಹನದ ಆರ್ ಸಿ, ವಿಮೆ ಸರ್ಟಿಫಿಕೇಟ್, ಮಾರಾಟ ಮಾಡುವವರ ಮಾಹಿತಿ, ಖರೀದಿಸುವವರ ವಿವರವನ್ನು ಆರ್ ಟಿ ಒ ಕಚೇರಿಗೆ ನೀಡಬೇಕು. ಫಾರ್ಮ್ 29 ಸಲ್ಲಿಸುವುದು ಎಂದರೆ, ನಿಮ್ಮ ವಾಹನದ ಮಾಲೀಕತ್ವ ಅಥವಾ ನೋಂದಣಿಯನ್ನು ಖರೀದಿಸುವವರಿಗೆ ವರ್ಗಾಯಿಸುವುದು. ಹೀಗೆ, ಅಗತ್ಯ ದಾಖಲೆಗಳನ್ನು ಆರ್ ಟಿ ಒ ಕಚೇರಿಗೆ ಸಲ್ಲಿಸಿದ ಬಳಿಕವೇ ನೀವು ವಾಹನವನ್ನು ಹಸ್ತಾಂತರಿಸಬೇಕು.
ಇದಕ್ಕೆ ಪ್ರಮುಖ ಕಾರಣವೂ ಇದೆ. ಖರೀದಿಸುವವರು ದುಡ್ಡು ಕೊಟ್ಟರು, ಅವರು ಬಳಿಕ ದಾಖಲೆಗಳನ್ನು ವರ್ಗಾವಣೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ವಾಹನ ತೆಗೆದುಕೊಂಡು ಹೋದರೆ, ವಾಹನದ ಮಾಲೀಕರೇ ಸಂಕಷ್ಟಕ್ಕೆ ಸಿಲುಕುತ್ತಾರೆ. ಹಾಗೆ, ಆಮೇಲೆ ವಾಹನದ ಮಾಲೀಕತ್ವದ ದಾಖಲೆ ಮಾಡಿಸಿಕೊಳ್ಳುತ್ತೇನೆ ಎಂದು ಹೋದವರು ಅಪಘಾತ ಮಾಡಿದರೆ, ಅವರೇ ಅಪಘಾತಕ್ಕೀಡಾದರೆ ಮಾರಾಟ ಮಾಡಿದ ಮಾಲೀಕರೇ ಹೊಣೆಗಾರರಾಗುತ್ತಾರೆ. ಹಾಗೆಯೇ, ಅವರೇ ಕಾನೂನು ಪ್ರಕ್ರಿಯೆಯನ್ನು ಎದುರಿಸಬೇಕಾಗುತ್ತದೆ.
ಇಂತಹ ಅಪಾಯ ಇರುವ ಕಾರಣ ವಾಹನದ ಮಾಲೀಕರು ಮೊದಲು ಫಾರ್ಮ್ 29 ಭರ್ತಿ ಮಾಡಿ ಆರ್ ಟಿ ಒಗೆ ಸಲ್ಲಿಸಬೇಕು. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಖರೀದಿದಾರರಿಗೆ ವಾಹನವನ್ನು ಹಸ್ತಾಂತರಿಸಬಾರದು ಎಂದು ಮೋಟಾರು ವಾಹನ ಕಾಯ್ದೆಯಲ್ಲಿಯೇ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹಾಗಾಗಿ, ಇವುಗಳನ್ನು ವಾಹನ ಮಾರಾಟಗಾರರು ಗಮನದಲ್ಲಿ ಇಟ್ಟುಕೊಳ್ಳಬೇಕು.
ಇದನ್ನು ಓದಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 6 ಹುದ್ದೆಗಳು: 30 ಸಾವಿರ ರೂ. ಸಂಬಳ



















