ಗದಗ: ಕಾನೂನು ಸಚಿವ ಎಚ್.ಕೆ.ಪಾಟೀಲ್ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವ ಹಿನ್ನಲೆ ಬಿಜೆಪಿ ಕಾರ್ಯಕರ್ತರು ಗದಗದ ಬೆಟಗೇರಿ ನಗರಸಭೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಗದಗ ಬೆಟಗೇರಿ ಅವಳಿ ನಗರದಲ್ಲಿ ಕಳೆದ 20 ದಿನಗಳಿಂದ ನೀರು ಬಂದಿಲ್ಲವೆಂದು ಕಾರ್ಯಕರ್ತರು ಪ್ರತಿಭಟಿಸಿದ್ದು, ಸಚಿವ ಹೆಚ್ ಕೆ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ, MLC ಎಸ್.ವಿ. ಸಂಕನೂರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ರೊಚ್ಚಿಗೆದ್ದ ಕಾರ್ಯಕರ್ತರು ನಗರ ಸಭೆಯ ಒಳಗೆ ನುಗ್ಗಲು ಮುಂದಾಗಿದ್ದರು. ಆದರೆ, ಪೊಲೀಸರು ಕಾರ್ಯಕರ್ತರನ್ನು ತಡೆದ ಬಳಿಕ ನಗರಸಭೆಯ ಗೇಟ್ ಬಳಿಯೇ ಕುಳಿತು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಆಗಮಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ಈ ಹಿಂದೆ ಹಲವು ಬಾರಿ ಈ ಸಮಸ್ಯೆ ಬಗ್ಗೆ ನಿಮ್ಮ ಗಮನಕ್ಕೆ ತರಲಾಗಿದೆ. ಆದಾಗ್ಯೂ ನೀವು ನಗರಸಭೆ ಆಡಳಿತ ಅಧಿಕಾರಿಯಾಗಿದ್ದರೂ ಸಹ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನಿರ್ಲಕ್ಷ್ಯ ತೋರಿದ್ದಲ್ಲದೆ, ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ನೀವು ನನಗೆ ಮರ್ಯಾದೆ ಕೊಡುತ್ತಿಲ್ಲ ಅಂತ ಬಿಜೆಪಿ ಕಾರ್ಯಕರ್ತರಿಗೆ ಜಿಲ್ಲಾಧಿಕಾರಿ ಕೈ ಮುಗಿದ ಪ್ರಸಂಗವೂ ನಡೆಯಿತು. ಆ ಬಳಿಕ ಎಮ್ ಎಲ್ ಸಿ ನೇತೃತ್ವದಲ್ಲಿ ಕೆಲವೇ ಸದಸ್ಯರ ಜೊತೆಗೆ ಗುಪ್ತ ಸಭೆ ನಡೆಸಿ ನೀರಿನ ಸಮಸ್ಯೆ ಬಗೆಹರಿಸವ ಬಗ್ಗೆ ಚರ್ಚಿಸಿದರು.
