ಬೆಂಗಳೂರು: ಅತ್ಯಾಚಾರ ಹಾಗೂ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಅಂದರೆ ಆ. 27ರಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ದೊಡ್ಡ ಮಹತ್ವದ ದಿನ ಎನ್ನಲಾಗಿದೆ.
ಪ್ರಕರಣದ ತನಿಖೆ ಕೈಗೊಂಡಿರುವ ಎಸ್ ಐಟಿ ಅಧಿಕಾರಿಗಳು ಜಾಮೀನು ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕುರಿತು ಹೈಕೋರ್ಟ್ ನಾಳೆ(ಬುಧವಾರ) ಆದೇಶ ಪ್ರಕಟಿಸಲಿದೆ. ಈ ಸಂದರ್ಭದಲ್ಲಿ ಅಪಹರಣ ಪ್ರಕರಣದ ಇನ್ನಿತರ ಆರೋಪಿಗಳಾದ ಎಚ್.ಕೆ. ಸುಜಯ್, ಸತೀಶ್ ಬಾಬಣ್ಣ, ರಾಜಗೋಪಾಲ, ಮಾವುಗೌಡ ಅವರ ಜಾಮೀನು ಅರ್ಜಿ ಆದೇಶ ಕೂಡ ಪ್ರಕಟಿಸಲಿದೆ.
ನ್ಯಾ.ಎಂ. ನಾಗಪ್ರಸನ್ನ ಅವರ ನ್ಯಾಯಪೀಠದಿಂದ ಆದೇಶ ಹೊರ ಬರಲಿದೆ. ವಾದ-ಪ್ರತಿವಾದವನ್ನ ಆಲಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಹೀಗಾಗಿ ಆ. 27ರಂದು ಮಧ್ಯಾಹ್ನ 2.30ಕ್ಕೆ ತೀರ್ಪು ಪ್ರಕಟವಾಗಲಿದೆ. ಹೀಗಾಗಿ ಎಚ್.ಡಿ. ರೇವಣ್ಣ ಅವರಿಗೆ ಆತಂಕ ಶುರುವಾಗಿದೆ. ನಾಳೆ ಏನಾಗಲಿದೆ ಎಂಬುವುದು ರಾಜ್ಯದ ಜನರ ಕುತೂಹಲವಾಗಿದೆ.