ಮುಂಬೈ: ಮುಂಬೈನಲ್ಲಿ ಮೊನ್ನೆತಾನೇ ಹೊಸದಾಗಿ ಉದ್ಘಾಟನೆಗೊಂಡ ಮೆಟ್ರೋ ಮಾರ್ಗ-3ರಲ್ಲಿ (ಆಕ್ವಾ ಲೈನ್) ಗುಟ್ಕಾ ಕಲೆಗಳು ರಾರಾಜಿಸುತ್ತಿದ್ದು, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಜನರು ಎಷ್ಟು ಬೇಗನೆ ದುರ್ಬಳಕೆ ಮಾಡುತ್ತಾರೆ ಎಂಬುದಕ್ಕೆ ಸಾಕ್ಷಿ ನುಡಿದಿದೆ. ಪ್ರಯಾಣಿಕರೊಬ್ಬರು ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ ಮೇಲೆ ಗುಟ್ಕಾ ಉಗುಳಿ ಮಾಡಿದ ಕಲೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಮೆಟ್ರೋ ರೈಲುಗಳು ಲಕ್ಷಾಂತರ ಜನರ ದೈನಂದಿನ ಪ್ರಯಾಣವನ್ನು ಸುಲಭಗೊಳಿಸಿವೆ. ಸ್ವಚ್ಛತೆಗೆ ಹೆಸರುವಾಸಿಯಾದ ಮೆಟ್ರೋಗಳಲ್ಲಿ ಕಟ್ಟುನಿಟ್ಟಿನ ನಿಯಮಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳಿದ್ದರೂ, ಕೆಲವರು ಕಾನೂನನ್ನು ಉಲ್ಲಂಘಿಸುವುದನ್ನು ಮುಂದುವರಿಸಿದ್ದಾರೆ. ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಹೊಚ್ಚ ಹೊಸ ಮೆಟ್ರೋ ನಿಲ್ದಾಣದಲ್ಲಿ ಈ ರೀತಿ ಕಲೆಗಳನ್ನು ನೋಡಿ ಅನೇಕರು ನಿರಾಶೆ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಜಾಲತಾಣದಲ್ಲಿ ಆಕ್ರೋಶ”
ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್)ನಲ್ಲಿ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, “ರಾಜ್ಯಗಳಿಂದ ವಿಭಜನೆಗೊಂಡಿದ್ದೇವೆ, ಆದರೆ ಉಗುಳಿನಿಂದ ಒಂದಾಗಿದ್ದೇವೆ” ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕೆಲವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಉಗುಳಿದ ಆರೋಪಿಗಳಿಗೆ ದಂಡ ವಿಧಿಸಬೇಕೆಂದು ಸಲಹೆ ನೀಡಿದ್ದಾರೆ. ಇನ್ನು ಕೆಲವರು, ಸಹ ಪ್ರಯಾಣಿಕರೇ ಇಂತಹವರಿಗೆ ಪಾಠ ಕಲಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. “ಇದೇ ಮೆಟ್ರೋದ ಮಾರ್ಗ-7ರಲ್ಲಿಯೂ ಎಸ್ಕಲೇಟರ್‌ಗಳ ಬದಿಯ ಗೋಡೆಗಳ ಮೇಲೆ ಕಲೆಗಳನ್ನು ಮಾಡಲಾಗಿದೆ” ಎಂದು ಮತ್ತೊಬ್ಬರು ಆರೋಪಿಸಿದ್ದಾರೆ.
“ಪಾಟ್ನಾ ಮೆಟ್ರೋದಲ್ಲೂ ಇದೇ ಸ್ಥಿತಿ”
ಇದೇ ರೀತಿಯ ಘಟನೆ ಈ ವಾರಾಂತ್ಯದಲ್ಲಿ ಉದ್ಘಾಟನೆಗೊಂಡ ಬಿಹಾರಾದ ಪಾಟ್ನಾ ಮೆಟ್ರೋದಲ್ಲಿಯೂ ವರದಿಯಾಗಿದೆ. ಪಾಟ್ನಾ ಮೆಟ್ರೋ ನಿಲ್ದಾಣಗಳು ಮತ್ತು ಪ್ಲಾಟ್‌ಫಾರ್ಮ್‌ಗಳು ಗುಟ್ಕಾ ಕಲೆಗಳಿಂದ ತುಂಬಿಹೋಗಿರುವ ವೀಡಿಯೊವೊಂದು ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅಕ್ಟೋಬರ್ 6ರಂದು ಪಾಟ್ನಾ ಮೆಟ್ರೋದ ಮೊದಲ ಹಂತವನ್ನು ಉದ್ಘಾಟಿಸಿದ್ದರು. ಆದರೆ, ಕೇವಲ 4-5 ದಿನಗಳಲ್ಲಿ ‘ಗುಟ್ಕಾ ಗ್ಯಾಂಗ್’ ಸಕ್ರಿಯವಾಗಿ ಮೆಟ್ರೋಗೆ ಬಣ್ಣ ಬಳಿಯಲು ಆರಂಭಿಸಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.