ರಾಯಚೂರು: ವಿದ್ಯಾರ್ಥಿಯೋರ್ವ ಪೆನ್ನು ಕದ್ದಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಕತ್ತಲ ಕೋಣೆಯಲ್ಲಿ ಹಾಕಿರುವ ಘಟನೆ ನಡೆದಿದೆ.
ರಾಯಚೂರಿನ ರಾಮಕೃಷ್ಣ ಆಶ್ರಮದಲ್ಲಿ (Ramakrishna Ashram) ಈ ಅಮಾನವೀಯ ಘಟನೆ ನಡೆದಿದೆ. ವಿದ್ಯಾರ್ಥಿ ಪೆನ್ನು ಕದ್ದಿದ್ದಾನೆ ಎಂಬ ಕಾರಣಕ್ಕೆ ಆಶ್ರಮದ ಗುರೂಜಿ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ್ದಾರೆ (Assault Case) ಎನ್ನಲಾಗಿದೆ.
ಅಲ್ಲದೆ, ವಿದ್ಯಾರ್ಥಿಯನ್ನು ಮೂರು ದಿನಗಳ ಕಾಲ ಕತ್ತಲೆ ಕೋಣೆಯಲ್ಲಿ ಕೂಡಿಟ್ಟಿದ್ದಾರೆ. ವಿದ್ಯಾರ್ಥಿಯ ಕಣ್ಣುಗಳು ಬಾವು ಬರುವಂತೆ ಹಲ್ಲೆ ನಡೆಸಿದ್ದಾರೆ. ವಿದ್ಯಾರ್ಥಿ ಶ್ರವಣ್ ಕುಮಾರ್ ಹಲ್ಲೆಗೊಳಗಾದ ಬಾಲಕ. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಶ್ರವಣ್ ಕುಮಾರ್ ಕುಟುಂಬದಲ್ಲಿ ಕಡು ಬಡತನದ ಹಿನ್ನೆಲೆಯಲ್ಲಿ ಆಶ್ರಮದಲ್ಲಿದ್ದ. ಆದರೆ, ಆತನ ವಿರುದ್ಧ ಸಹಪಾಠಿಗಳು ಹೇಳಿದ್ದಾರೆಂಬ ಕಾರಣಕ್ಕೆ ಗುರೂಜಿ ಮನಬಂದಂತೆ ಥಳಿಸಿದ್ದಾರೆ. ಜೊತೆಗೆ ಮೂರು ದಿನಗಳ ಕಾಲ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ ಎನ್ನಲಾಗಿದೆ.
ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ಆಕಸ್ಮಿಕವಾಗಿ ಶ್ರವಣ್ ಕುಮಾರ್ ತಾಯಿ ಭೇಟಿ ನೀಡಿದಾಗ ವಿಷಯ ಬಹಿರಂಗವಾಗಿದೆ. ಸದ್ಯ ಶ್ರವಣಕುಮಾರ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಕೈ ತುಂಬಾ ಗಾಯಗಳಾಗಿದ್ದು, ಕಣ್ಣು ಪೂರ್ತಿ ಬಾವು ಬಂದಿದೆ. ಮಗುವಿನ ಸ್ಥಿತಿಗೆ ಪೋಷಕರು ಕಣ್ಣೀರು ಸುರಿಸಿದ್ದಾರೆ.