ಗುರುಗ್ರಾಮ್: ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಚಕ್ಕಂದವಾಡುತ್ತಿದ್ದಾಗ ಪತಿಯ ಕೈಗೆ ಸಿಕ್ಕಿಬಿದ್ದಿದ್ದು, ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಪತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಗುರುಗ್ರಾಮದ ಬಸಾಯಿ ಎನ್ಕ್ಲೇವ್ನಲ್ಲಿ ನಡೆದಿದೆ. ವಿಶೇಷವೆಂದರೆ, “ಮೀರತ್ ಕೊಲೆ(Meerat Murder) ಗೊತ್ತಲ್ವಾ, ನಿನ್ನನ್ನೂ ಹಾಗೆಯೇ ಕೊಂದು, ಪೀಸ್ ಪೀಸ್ ಮಾಡಿ, ಟ್ಯಾಂಕ್ ನೊಳಗೆ ಹಾಕಿ ಸಿಮೆಂಟ್ ಸುರಿಯುತ್ತೇವೆ” ಎಂದೂ ಪತಿಗೆ ಪತ್ನಿ ಮತ್ತು ಪ್ರಿಯಕರ ಬೆದರಿಕೆಯೊಡ್ಡಿದ್ದಾರೆ.
ಕಳೆದ ತಿಂಗಳಷ್ಟೇ ಮೀರತ್ ನಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಪತಿಯನ್ನು ಕ್ರೂರವಾಗಿ ಕೊಂದು, ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ಡ್ರಮ್ ವೊಂದರಲ್ಲಿ ತುಂಬಿ, ಅದರ ಮೇಲೆ ಹಸಿ ಸಿಮೆಂಟ್ ತುಂಬಿಸಿದ್ದ ಭಯಾನಕ ಘಟನೆ ಬಹಿರಂಗವಾಗಿತ್ತು. ಈ ಅಪರಾಧವು ದೇಶಾದ್ಯಂತ ಭಾರೀ ಸದ್ದು ಮಾಡಿತ್ತು.
ಗುರುಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದ ಘಟನೆಗೆ ಸಂಬಂಧಿಸಿ ಹರ್ಯಾಣದ ಜಜ್ಜರ್ನವರಾದ ಕ್ಯಾಬ್ ಚಾಲಕ ಮೌಸಮ್ ಪೊಲೀಸರಿಗೆ ದೂರು ನೀಡಿದ್ದಾರೆ. 2 ವರ್ಷಗಳ ಹಿಂದೆಯೇ ಈತ ಪಂಜಾಬ್ನ ಮೋಗಾದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಇವರಿಬ್ಬರ ಮದುವೆಗೆ ಮನೆಯವರ ವಿರೋಧವಿದ್ದ ಕಾರಣ, ಇಬ್ಬರೂ ಗುರುಗ್ರಾಮದ ಬಸಾಯಿ ಎನ್ ಕ್ಲೇವ್ ನಲ್ಲಿ ಜೀವಿಸುತ್ತಿದ್ದರು.
“ನಾನು ನೈಟ್ ಡ್ಯೂಟಿ ಮುಗಿಸಿಕೊಂಡು ಸೋಮವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಮನೆಗೆ ತಲುಪಿದಾಗ, ಕೋಣೆಯಲ್ಲಿ ಪತ್ನಿ ಇರಲಿಲ್ಲ. ಆಕೆಯನ್ನು ಹುಡುಕಿಕೊಂಡು ಟೆರೇಸ್ಗೆ ಹೋದಾಗ ಆಕೆ ನವೀನ್ ಎಂಬಾತನೊಂದಿಗೆ ಇರುವುದನ್ನು ನೋಡಿದೆ.ಇಲ್ಲಿಗೇಕೆ ಬಂದೆ ಎಂದು ನಾನು ಪ್ರಶ್ನಿಸುತ್ತಿದ್ದಂತೆ, ನವೀನ್ ಪಿಸ್ತೂಲ್ ತೆಗೆದುಕೊಂಡು ಅದನ್ನು ನನ್ನ ಹಣೆಯ ಇಟ್ಟ. ನಾನು ತಡೆಯಲು ಮುಂದಾದಾಗ ಪಿಸ್ತೂಲಿನ ಕಡೆಯಿಂದ ನನ್ನ ತಲೆ ಮೇಲೆ ಹೊಡೆದ. ಜೊತೆಗೆ, ಸುಮ್ಮನಿದ್ದರೆ ಸರಿ, ಇಲ್ಲದಿದ್ದರೆ, ಮೀರತ್ ಪ್ರಕರಣದಂತೆ ನಿನ್ನನ್ನು ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿದ. ನನ್ನ ಕೂಗು ಕೇಳಿ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದರು. ಆಗ ಅವರಿಬ್ಬರೂ ಅಲ್ಲಿಂದ ಓಡಿ ಹೋದರು” ಎಂದು ಮೌಸಮ್ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಎಫ್ಐಆರ್ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಹುಡುಕಾಟ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



















