ಉಡುಪಿ: ಪರ್ಯಾಯ ಪುತ್ತಿಗೆ ಮಠ, ಕೃಷ್ಣ ಮಠದ ಆಶ್ರಯದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕೇಂದ್ರ ಸಮಿತಿ ಸಹಯೋಗದೊಂದಿಗೆ “ಗುರು ಪೂರ್ಣಿಮೆ’ ಪ್ರಯುಕ್ತ ಪರ್ಯಾಯ ಪುತ್ತಿಗೆ ಮಠಾಧಿಧೀಶ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿಶ್ರೀ ಸುಶ್ರೀಂದ್ರತೀರ್ಥ ಶ್ರೀಗೆ ಗುರುವಾರ ರಾಜಾಂಗಣದಲ್ಲಿ “ಗುರು ವಂದನೆ’ ಸಲ್ಲಿಸಲಾಯಿತು.
ಸುಗುಣೇಂದ್ರತೀರ್ಥ ಶ್ರೀ ಮಾತನಾಡಿ, ಗುರು ಎಂದರೆ ತಣ್ಣೀ, ಮಹತ್ವದ ಸ್ಥಾನ. ಇದನ್ನು ಗುರುತಿಸುವುದು ಬಹಳ ಮುಖ್ಯ. ಭಗವಂತನನ್ನು ಹೊರತುಪಡಿಸಿ, ಉಳಿದೆಲ್ಲ ಗುರುಗಳು ಮತ್ತೂಬ್ಬರ ಶಿಷ್ಯರಾಗಿಯೇ ಇದ್ದವರು. ಆದರೆ ಭಗವಂತ ಮಾತ್ರ ಶಿಷ್ಯನಾಗದ ಗುರು. ಆದರೆ, ತಾನು ಮಾಡಿದ್ದನ್ನೇ ಎಲ್ಲರೂ ಅನುಸರಿಸಬಹುದು ಎಂಬ ಕಾರಣಕ್ಕೆ ಶಿಷ್ಯನಾಗಿಯೂ ಭಗವಂತ ತನ್ನ ಲೀಲೆಯನ್ನು ತೋರಿದ್ದಾನೆ. ಆ ಕಾರಣದಿಂದಲೇ ಕೃಷ್ಣ ದೇವರು ಜಗದ್ಗುರು ಎಂದರು.
ದೇವರ ಸೇವೆ ಮಾಡುತ್ತೇವೆ ಎಂದು ಗುರುವನ್ನು ನಿರ್ಲಕ್ಷಿಸಬಾರದು. ಗುರುಭಕ್ತಿಗೆ ದೇವರ ಅನುಗ್ರಹ ಇರುತ್ತದೆ. ಹರಿಭಕ್ತಿಯ ಜತೆಗೆ ಗುರುಭಕ್ತಿಯೂ ಅಷ್ಟೇ ಮುಖ್ಯ. ಭಗವಂತನೇ ಗುರುವಿಗೆ ಮಹತ್ವ ನೀಡಿದ್ದಾನೆ. ಹೀಗಾಗಿ ಯಾವ ಸಂದರ್ಭದಲ್ಲೂ ಗುರುವಿನ ಅಲಕ್ಷ್ಯ ಸಲ್ಲದು ಎಂದರು.
ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮಾತನಾಡಿ, ಸಾಮಾನ್ಯ ಜನರಲ್ಲಿ ಭಗವತ್ ಪ್ರಜ್ಞೆಯನ್ನು ಉತ್ತೇಜಿಸುವವರೇ ಗುರುಗಳು ಎಂದು ಶಾಸ್ತ್ರ ಹೇಳುತ್ತದೆ. ಲೌಕಿಕ, ಆಧ್ಯಾತ್ಮಕ ಶಕ್ತಿ ಸಾಧನೆಗೆ ಗುರುಗಳ ಮಾರ್ಗದರ್ಶನ ಅತಿ ಅಗತ್ಯ ಎಂದರು.
ಗುರುವಂದನೆ ಹಿನ್ನೆಲೆಯಲ್ಲಿ ವೇದಿಕೆಯಲ್ಲಿ ವಿಶೇಷ ಆಸನ ರಚಿಸಿ, ಅದರ ಮೇಲೆ ಶ್ರೀಪಾದ್ವಯರನ್ನು ಕುಳ್ಳಿರಿಸಿ ಪೇಟ ತೊಡಿಸಿ, ಪುಷ್ಪಾರ್ಚನೆ ಸಹಿತವಾಗಿ ವಂದಿಸಲಾಯಿತು.


















