ರಾಯ್ಪುರ್: ಛತ್ತೀಸ್‌ಗಢದ (Chhattisgarh) ಸುಕ್ಮಾ-ದಂತೇವಾಡ ಗಡಿಯಲ್ಲಿ ಭದ್ರತಾ ಪಡೆ ಹಾಗೂ ನಕ್ಸಲರ ಮಧ್ಯೆ ಗುಂಡಿನ ಚಕಮಕಿ(Encounter) ನಡೆದಿದ್ದು, 16 ನಕ್ಸಲರು (Naxal) ಹತರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಾವೋವಾದಿಗಳಿರುವ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ತೆರಳಿತ್ತು. ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಶನಿವಾರ ಬೆಳಿಗ್ಗೆ ಕೇರ್ಲಪಾಲ್ ಪೊಲೀಸ್ ಠಾಣೆ ಬಳಿಯ ಕಾಡಿನಲ್ಲಿ ನಕ್ಸಲ್ ರ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ.
ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಇಲ್ಲಿಯವರೆಗೆ 16 ನಕ್ಸಲರ ಶವಗಳು ಪತ್ತೆಯಾಗಿವೆ. ಕಾರ್ಯಾಚರಣೆ ಈಗಲೂ ಮುಂದುವರೆದಿದೆ. ಸ್ಥಳದಲ್ಲಿ ಸ್ಫೋಟಕ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.