ಅಹ್ಮದಾಬಾದ್: ಕಛ್ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿ ಸಮೀಪ 15 ಮಂದಿ ಪಾಕಿಸ್ತಾನಿ ಮೀನುಗಾರರನ್ನು ಸೆರೆ ಹಿಡಿದಿರುವ ಗಡಿ ಭದ್ರತಾ ಪಡೆ (BSF), ಅವರಿಂದ ಒಂದು ಯಾಂತ್ರಿಕ ನಾಡದೋಣಿಯನ್ನು ವಶಪಡಿಸಿಕೊಂಡಿದೆ ಎಂದು ಗಡಿ ಭದ್ರತಾ ಪಡೆ ಇಂದು(ರವಿವಾರ) ಅಧಿಕೃತವಾಗಿ ತಿಳಿಸಿದೆ.
ಗುಜರಾತ್ ರಾಜ್ಯದ ಕಛ್ ಪ್ರಾಂತ್ಯದಲ್ಲಿನ ಕೋರಿ ಕ್ರೀಕ್ ಬಳಿಯ ಗಡಿ ಹೊರಠಾಣೆ ಸಮೀಪದ ಸಾಮಾನ್ಯ ಪ್ರದೇಶದಲ್ಲಿ ಅಪರಿಚಿತ ದೋಣಿಯೊಂದು ಪತ್ತೆಯಾಗಿದೆ ಎಂಬ ನಿಖರ ಮಾಹಿತಿಯ ಆಧಾರದ ಮೇಲೆ, ಗಡಿ ಭದ್ರತಾ ಪಡೆಯ ನಿನ್ನೆ(ಶನಿವಾರ) ಶೋಧ ಕಾರ್ಯಾಚರಣೆಗೆ ಚಾಲನೆ ನೀಡಿತ್ತು.
“ಅಕ್ಕಪಕ್ಕದ ತೀರಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಯಿತು ಹಾಗೂ ಈ ಶೋಧ ಕಾರ್ಯಾಚರಣೆಯ ವೇಳೆ 60 ಕೆಜಿ ಮೀನು, ಒಂಬತ್ತು ಮೀನುಗಾರಿಕೆಯ ಬಲೆ, ಡೀಸೆಲ್, ಆಹಾರ ಸಾಮಗ್ರಿಗಳು ಮತ್ತು ಮರದ ದೊಣ್ಣೆಗಳನ್ನು ಹೊಂದಿದ್ದ ಒಂದು ಯಾಂತ್ರಿಕ ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದರಿಗೆ ಒಂದು ಮೊಬೈಲ್ ಫೋನ್, 200 ರೂ. ಪಾಕಿಸ್ತಾನಿ ನಗದನ್ನೂ ವಶಪಡಿಸಿಕೊಳ್ಳಲಾಗಿದೆ’ ಎಂದು ಗಡಿ ಭದ್ರತಾ ಪಡೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.