ಅಮರಾವತಿ: ಮನುಷ್ಯನ ದೇಹದ ಪ್ರತಿರೋಧ ವ್ಯವಸ್ಥೆಯು ಮೇಲೆ ದಾಳಿ ಮಾಡುವ ವಿಚಿತ್ರ ಕಾಯಿಲೆ ಗೀಲನ್ ಬಾ ಸಿಂಡ್ರೋಮ್ಗೆ (GBS) ಭಾರತದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು ಆತಂಕ ಸೃಷ್ಟಿಸಿದೆ. ಇತ್ತೀಚಿನ ವರದಿ ಪ್ರಕಾರ ಆಂಧ್ರದಲ್ಲಿ ಮಹಿಳೆ ಹಾಗೂ ಒಬ್ಬ ಬಾಲಕ ಮೃತಪಟ್ಟಿದ್ದಾರೆ.
‘ಗುಂಟೂರಿನಲ್ಲಿ ಕಮಲಮ್ಮ ಹಾಗೂ ಶ್ರೀಕಾಕುಲಮ್ನ ಬಾಲಕ ಮೃತಪಟ್ಟವರು. ಅಂತೆಯೇ ಆಂಧ್ರಪ್ರದೇಶದಲ್ಲಿ ಸದ್ಯ 17 ಸಕ್ರೀಯ ಪ್ರಕರಣಗಳಿವೆ. ಇದು ಒಬ್ಬೊರಿಂದ ಒಬ್ಬರಿಗೆ ಹರಡುವುದಿಲ್ಲ. ಆದರೆ, ಅಶಿಸ್ತಿನ ಜೀವನ ಹಾಗೂ ಆಹಾರ ಪದ್ಧತಿಯಲ್ಲಿ ಏರುಪೇರು ಸಮಸ್ಯೆಗೆ ಕಾರಣವಾಗುತ್ತವೆ. ಹೀಗಾಗಿ ಬೇಯದ ಚಿಕನ್ ತಿನ್ನಬಾರದು ಎಂದು ಸೂಚನೆ ನೀಡಲಾಗಿದೆ.
ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಇಬ್ಬರಲ್ಲಿ ಗಿಲೆನ್ ಬಾ ಸಿಂಡ್ರೋಮ್ ಕಂಡುಬರುತ್ತದೆ. ‘2024ರಲ್ಲಿ ಒಟ್ಟು 267 ಜಿಬಿಎಸ್ ಪ್ರಕರಣಗಳು ಕಂಡುಬಂದಿದ್ದವು. ಸೋಂಕಿಗೆ ಒಳಗಾದವರು ಸಾಮಾನ್ಯ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಕೆಲವೇ ಕೆಲವು ಗಂಭೀರ ಪ್ರಕರಣಗಳಿಗೆ ಇಮ್ಯುನೊಗ್ಲಾಬ್ಯುಲಿನ್ ಚುಚ್ಚುಮದ್ದು ಪಡೆಯಬೇಕಾಗುತ್ತದೆ.
ಈ ಸೋಂಕಿನಿಂದ ದೇಹದ ರೋಗನಿರೋಧಕ ವ್ಯವಸ್ಥೆಯ ನರವ್ಯೂಹದ ಮೇಲೆ ದಾಳಿ ನಡೆಸುತ್ತದೆ. ಇದರಿಂದ ಮಾಂಸಖಂಡದಲ್ಲಿ ದೌರ್ಬಲ್ಯ , ಮರಗಟ್ಟುವಿಕೆ ಅನುಭವವಾಗಲಿದೆ. ತೀವ್ರ ಸಮಸ್ಯೆಗೆ ಒಳಗಾದವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡುವುದು ಅನಿವಾರ್ಯ.
ಅರೆಬರೆ ಬೆಂದ ಚಿಕನ್ ತಿನ್ನಬೇಡಿ: ಮಹಾರಾಷ್ಟ್ರ ಡಿಸಿಎಂ
ಮಹಾರಾಷ್ಟ್ರದಲ್ಲಿ ಜಿಬಿಎಸ್ ಉಲ್ಬಣಿಸಿದ್ದು, ಅರೆಬರೆ ಬೆಂದ ಕೋಳಿಯ ಖಾದ್ಯವನ್ನು ಜನರು ಸೇವಿಸಬಾರದು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮನವಿ ಮಾಡಿಕೊಂಡಿದ್ದಾರೆ.
‘ಪುಣೆಯ ಖಡಕ್ವಾಸ್ಲಾ ಡ್ಯಾಂ ಬಳಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಇದು ಕಲುಷಿತ ನೀರಿನಿಂದ ಹರಡಿದೆ ಎಂದು ಕೆಲವರು ಹೇಳಿದ್ದರು. ಇನ್ನೂ ಕೆಲವರು ಕೋಳಿ ಖಾದ್ಯ ಸೇವನೆಯಿಂದ ಹರಡುತ್ತಿದೆ ಹೇಳುತ್ತಿದ್ದಾರೆ. ಈ ಕುರಿತು ಕೂಲಂಕಷವಾಗಿ ತಪಾಸಣೆ ನಡೆಸಲಾಗಿದ್ದು, ಕೋಳಿಗಳನ್ನು ಕೊಲ್ಲುವ ಅವಕಶ್ಯತೆ ಇಲ್ಲ. ಆದರೆ ಕೋಳಿ ಮಾಂಸ ತಿನ್ನುವ ಅಭ್ಯಾಸ ಇರುವವರು, ಸಮರ್ಪಕವಾಗಿ ಬೇಯಿಸಿ ತಿನ್ನುವುದನ್ನು ರೂಢಿಸಿಕೊಳ್ಳಬೇಕು’ ಎಂದಿದ್ದಾರೆ.
ನೀರು ಮತ್ತು ಆಹಾರದಲ್ಲಿ ಬೆಳೆಯುವ ಕ್ಯಾಂಪಿಲೋಬ್ಯಾಕ್ಟರ್ ಜಿಜುನಿ ಎಂಬ ಬ್ಯಾಕ್ಟೀರಿಯಾ ಈ ಸೋಂಕು ಹರಡಲು ಕಾರಣ. ಹೀಗಾಗಿ ಆಹಾರವನ್ನು ಚೆನ್ನಾಗಿ ಬೇಯಿಸಿದ ನಂತರವೇ ತಿನ್ನಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.