ಬೆಂಗಳೂರು: ಕಾಂಗ್ರೆಸ್ ಉಚಿತ ವಿದ್ಯುತ್ ಘೋಷಣೆ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ವಿದ್ಯುತ್ ಬೇಡಿಕೆಯ ಪ್ರಮಾಣ ಹೆಚ್ಚಾಗಿದೆ. ಆದರೆ, ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹೇಳಿದ್ದಾರೆ.
ರಾಜ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ ಗರಿಷ್ಠ ಬೇಡಿಕೆ 18 ಸಾವಿರ ಮೆ. ವ್ಯಾಟ್ ದಾಟಿದೆ. ಏಪ್ರಿಲ್ ತಿಂಗಳ ವೇಳೆಗೆ 18,500 ರಿಂದ 19,000 ಮೆ.ವ್ಯಾಟ್ ವರೆಗೂ ಏರಿಕೆಯಾಗುವ ಸಾಧ್ಯತೆಯಿದೆ. ತಿಂಗಳ ಸರಾಸರಿ ಗಮನಿಸಿದರೆ ಏಪ್ರಿಲ್ ನಲ್ಲಿ 8.1ರಷ್ಟು ಬೇಡಿಕೆ ಹೆಚ್ಚಾಗಿದೆ. ಬೇಸಿಗೆ ಸಂದರ್ಭದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಠ 2 ಸಾವಿರ ಮೆ. ವ್ಯಾಟ್ ನಷ್ಟು ಪೂರೈಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.
ಫೆಬ್ರವರಿಯಲ್ಲಿ ವಿದ್ಯುತ್ ಬೇಡಿಕೆ ಗರಿಷ್ಠವಾಗಿದೆ. ಈ ಅವಧಿಯಲ್ಲಿ18,350 ಮೆಗಾ ವ್ಯಾಟ್ ಬೇಡಿಕೆ ತಲುಪಿದ್ದರೆ, ಮಾರ್ಚ್ ತಿಂಗಳಲ್ಲಿ 18,395 ಮೆಗಾ ವ್ಯಾಟ್ ನಷ್ಟಿದೆ. ಮಾ.7ರಂದು ಗರಿಷ್ಠ ವಿದ್ಯುತ್ ಬೇಡಿಕೆ 18,395 ಮೆಗಾ ವ್ಯಾಟ್ ತಲುಪಿದೆ. ಹೀಗಾಗಿ ಬೇಡಿಕೆಗೆ ತಕ್ಕಂತೆ ಜಲ ವಿದ್ಯುತ್ ಮತ್ತು ಉಷ್ಣವಿದ್ಯುತ್ ನ್ನು ದಾಖಲೆ ಪ್ರಮಾಣದಲ್ಲಿ ಉತ್ಪಾದನೆ ಮಾಡಿದ್ದೇವೆ ಎಂದಿದ್ದಾರೆ.
ರಾಜ್ಯದಲ್ಲಿ ಕೊರೊನಾ ನಂತರ ವಿದ್ಯುತ್ ಬೇಡಿಕೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಗರಿಷ್ಠ ವಿದ್ಯುತ್ ಬೇಡಿಕೆ 2020-21ನೇ ಸಾಲಿನಲ್ಲಿ 14,367 ಮೆಗಾವ್ಯಾಟ್ ಇದ್ದರೆ, 2021-22ರಲ್ಲಿ 14,818 ಮೆ.ವ್ಯಾ, 2022-23ರಲ್ಲಿ 15,828 ಮೆ.ವ್ಯಾ. ಇದ್ದರೆ, 2023-24ರಲ್ಲಿ 17,220 ಮೆ.ವ್ಯಾ. ಇತ್ತು. ಈ ಬಾರಿ 18,385 ಮೆ.ವ್ಯಾ.ಗೆ ಏರಿಕೆಯಾಗಿದೆ. ಈ ವೇಳೆ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್.ಶಿವಶಂಕರ ಇದ್ದರು.