ಬೆಂಗಳೂರು: ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಸ್ಲ್ಯಾಬ್ ಗಳನ್ನು ಇಳಿಕೆ ಮಾಡಿದೆ. ಸೆಪ್ಟೆಂಬರ್ 22 ಅಂದರೆ, ಇದೇ ಸೋಮವಾರದಿಂದ 170ಕ್ಕೂ ಅಧಿಕ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ. ಇನ್ನು, ಹಾಲಿನ ಉತ್ಪನ್ನಗಳ ಬೆಲೆಯೂ ಇಳಿಕೆಯಾಗಲಿದೆ. ಅದರಲ್ಲೂ, ಕೆಎಂಎಫ್ ನ ನಂದಿನಿ ಹಾಲಿನ ಉತ್ಪನ್ನಗಳ ಬೆಲೆಯೂ ಸೋಮವಾರದಿಂದ ಕಡಿಮೆಯಾಗಲಿದೆ.
ಹೌದು, ನಂದಿನಿ ಬ್ರ್ಯಾಂಡ್ ನ ಹಾಲು, ಮೊಸರು, ತುಪ್ಪ, ಲಸ್ಸಿ ಸೇರಿ ಹಲವು ಉತ್ಪನ್ನಗಳ ಬೆಲೆಯು ಇಳಿಕೆಯಾಗಲಿದೆ. ಮೊಸರಿನ ಬೆಲೆಯಂತೂ ಪ್ರತಿ ಲೀಟರ್ ಗೆ 4 ರೂಪಾಯಿ ಕಡಿತವಾಗಲಿದೆ ಎಂದು ತಿಳಿದುಬಂದಿದೆ. ಈಗಾಗಲೇ, ದೇಶದ ಎರಡನೇ ಅತಿದೊಡ್ಡ ಡೈರಿ ಸಂಸ್ಥೆಯಾದ ಮದರ್ ಡೈರಿಯ ಹಾಲು ಹಾಗೂ ವಿವಿಧ ಉತ್ಪನ್ನಗಳ ಬೆಲೆಯನ್ನು ಇಳಿಸಿದೆ. ಹಾಲು, ಮೊಸರು, ತುಪ್ಪ, ಬೆಣ್ಣೆ, ಪನೀರ್ ಸೇರಿ ವಿವಿಧ ಉತ್ಪನ್ನಗಳ ಬೆಲೆಯನ್ನು ಮದರ್ ಡೈರಿ ಇಳಿಸಿದೆ.
ಕೇಂದ್ರ ಸರ್ಕಾರವು 2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್ ಟಿ ವಿಧಿಸಿತ್ತು. ಅಲ್ಲದೆ, 2022ರಲ್ಲಿ ಜಿಎಸ್ ಟಿಯನ್ನು ಶೇ.12ಕ್ಕೆ ಹೆಚ್ಚಿಸಲಾಗಿತ್ತು. ಇದರಿಂದ ನಂದಿನಿ ಸೇರಿ ಎಲ್ಲ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಾಗಿತ್ತು. ಅಷ್ಟೇ ಏಕೆ, ಕಳೆದ ಏಪ್ರಿಲ್ ನಲ್ಲಿಯೇ ನಂದಿನಿ ಹಾಲು ಹಾಗೂ ಮೊಸರಿನ ಬೆಲೆಯಲ್ಲಿ ಲೀಟರ್ ಗೆ 4 ರೂಪಾಯಿ ಏರಿಕೆ ಮಾಡಲಾಗಿತ್ತು. ಇದು ಕೂಡ ಗ್ರಾಹಕರಿಗೆ ಭಾರಿ ಹೊರೆಯಾಗಿತ್ತು.
ಈಗ ಕೇಂದ್ರ ಸರ್ಕಾರವು ಹಾಲಿನ ಉತ್ಪನ್ನಗಳ ಮೇಲಿನ ಶೇ.12ರಷ್ಟು ಜಿಎಸ್ ಟಿಯನ್ನು ಶೇ.5ಕ್ಕೆ ಇಳಿಸಿದೆ. ಅಂದರೆ, ಜಿಎಸ್ ಟಿಯಲ್ಲಿ ಶೇ.7ರಷ್ಟು ಇಳಿಕೆಯಾಗಲಿದೆ. ಇದರಿಂದಾಗಿ ನಂದಿನಿ ಹಾಲಿನ ಉತ್ಪನ್ನಗಳ ಬೆಲೆಯು ಕಡಿಮೆಯಾಗಲಿದೆ. ಈಗಾಗಲೇ, ಸೆ.22ರಿಂದಲೇ ನಂದಿನಿ ಉತ್ಪನ್ನಗಳ ಜಿಎಸ್ ಟಿಯಲ್ಲಿ ಶೇ 7ರಷ್ಟು ಕಡಿಮೆಯಾಗಲಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ತಿಳಿಸಿದ್ದಾರೆ. ಶುಕ್ರವಾರ ನಡೆಯುವ ಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.