ಬೆಂಗಳೂರು: ಇತ್ತೀಚೆಗಷ್ಟೇ ಸಿಸಿಬಿ ಅಧಿಕಾರಿಗಳು ಅಕ್ರಮ ಎಸಗಿದ ಹಿನ್ನೆಲೆಯಲ್ಲಿ ನಾಲ್ವರು ಜಿಎಸ್ ಟಿ ಅಧಿಕಾರಿಗಳನ್ನು ಬಂಧಿಸಿದ್ದರು. ತನಿಖೆ ವೇಳೆ ಬಂಧಿತ ಮಹಿಳಾ ಅಧಿಕಾರಿಯ ಮನೆಯಲ್ಲಿ 32 ಮೊಬೈಲ್, 50 ಚೆಕ್ ಬುಕ್ ಮತ್ತು ಎರಡು ಲ್ಯಾಪ್ ಟಾಪ್ ಗಳು ಪತ್ತೆಯಾಗಿವೆ.
ಆಗಸ್ಟ್ 30 ರಂದು ಉದ್ಯಮಿ ಕೇಶವ್ ಎಂಬುವವರ ಮನೆ ಮೇಲೆ ಜಿಎಸ್ ಟಿ ಅಧಿಕಾರಿಗಳು ದಾಳಿ ನಡೆಸಿದ್ದರು. “ನಾವು, ಇಡಿ ಮತ್ತು ಜಿಎಸ್ ಟಿಯವರು ಅಂತ ದಾಳಿ ಮಾಡಿದ ಅಧಿಕಾರಿಗಳು, ಉದ್ಯಮಿ ಕೇಶವ್ ಅವರ ಶೋರೂಂ, ಮನೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಪರಿಶೀಲನೆ ನಡೆಸಿ, ನಾಲ್ವರನ್ನು ಬಲವಂತವಾಗಿ ವಶಕ್ಕೆ ಪಡೆದು ಜೀವನ್ ಭೀಮಾನಗರ, ಇಂದಿರಾನಗರದ ವಿವಿಧ ಕಡೆಗಳಲ್ಲಿ ಸುತ್ತಾಡಿಸಿದ್ದರು. ಆನಂತರ ಕೂಡಿ ಹಾಕಿ ಮೂರು ಕೋಟಿ ರೂ. ನೀಡುವಂತೆ ಕೇಶವ್ ಮೇಲೆ ಹಲ್ಲೆ ನಡೆಸಿದ್ದರು.
ಆಗ ಉದ್ಯಮಿ ಕೇಶವ್ ಅವರು ರೋಷನ್ ಜೈನ್ ಎಂಬುವವರಿಗೆ ವಾಟ್ಸಪ್ ಕಾಲ್ ಮಾಡಿ ಮೂರು ಕೋಟಿ ರೂ. ಹಣ ತರುವಂತೆ ಹೇಳಿದ್ದರು. ಮಾರನೆ ದಿನ ರೋಷನ್ ಜೈನ್ ಒಂದೂವರೆ ಕೋಟಿ ರೂ. ಹಣ ತಂದಿದ್ದಾರೆ. ಆಗ ಅಧಿಕಾರಿಗಳು ಬಿಟ್ಟು ಕಳುಹಿಸಿದ್ದಾರೆ.
ಈ ಕುರಿತು ದೂರು ದಾಖಲಾಗುತ್ತಿದ್ದಂತೆ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಲು ಆರಂಭಿಸಿದ್ದರು. ತನಿಖೆ ಸಂದರ್ಭದಲ್ಲಿ ಈ ನಾಲ್ವರು ಜಿಎಸ್ ಟಿ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಅಕ್ರಮವಾಗಿ ದಾಳಿ ನಡೆಸಿ ಹಣ ಪಡೆದಿರುವುದು ಗೊತ್ತಾಗಿದೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಟಲಿಜೆನ್ಸ್ ಆಫೀಸರ್ ಸೊನಾಲಿ ಸಹಾಯಿ, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ಮೋನೊಜ್ ಸೈನಿ, ಎಸ್ಪಿ (ಸೂಪರಿಂಡೆಂಟ್) ಅಭಿಷೇಕ್, ಸೀನಿಯರ್ ಇಂಟಲಿಜೆನ್ಸ್ ನಾಗೇಶ್ ಬಾಬು ಎಂಬ ನಾಲ್ವರು ಅಧಿಕಾರಿಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದರು. ಈಗ ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳನ್ನು 13 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು, ವಿಚಾರಣೆ ನಡೆಸಿದ್ದಾರೆ.