ಬೆಳಗಾವಿ: ನಾಡಿನ ಮನೆಯ ಯಜಮಾನಿಯರಿಗೆ ಮಾಸಿಕ 2 ಸಾವಿರ ರೂ. ಸಹಾಯಧನ ನೀಡುವ ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme) ಹಣವು ಮಹಿಳೆಯರ ಖಾತೆಗೆ ಜಮೆಯಾಗುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಶೀಘ್ರದಲ್ಲೇ ಗೃಹ ಲಕ್ಷ್ಮೀ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಅಪಘಾತದ ಬಳಿಕ ಚೇತರಿಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳಕರ್ ಅವರು ಸರಳವಾಗಿ ಜನ್ಮದಿನ ಆಚರಿಸಿಕೊಂಡರು. ಬೆಳಗಾವಿಯ ಗೃಹ ಕಚೇರಿಯಲ್ಲಿ ಅಭಿಮಾನಿಗಳೊಂದಿಗೆ ಜನ್ಮದಿನಾಚರಣೆ ಮಾಡಿಕೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ಮೊದಲಿನ ಮಾದರಿಯಂತೆ ಜಿಲ್ಲಾ ಉಪ ನಿರ್ದೇಶಕರ ಮೂಲಕವೇ ಗೃಹಲಕ್ಷ್ಮೀ ಯೋಜನೆ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ” ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಣ ರವಾನೆಯಾಗುತ್ತಿದ್ದು, ಉಪ ನಿರ್ದೇಶಕರ ಮೂಲಕ ಹಣ ಹಾಕಲಾಗುತ್ತಿದೆ ಎಂದು ಹೇಳಿದರು. ಇದರಿಂದಾಗಿ ನಾಡಿನ ಲಕ್ಷಾಂತರ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಶೀಘ್ರದಲ್ಲೇ ಹಣ ಜಮೆಯಾಗುವುದು ಖಾತ್ರಿಯಾದಂತಾಗಿದೆ.
ಶೀಘ್ರದಲ್ಲೇ ಜನರ ಸೇವೆಗೆ ಎಂದ ಸಚಿವೆ
ಆರೋಗ್ಯದ ಬಳಿಕ ಮಾತನಾಡಿದ ಅವರು, “ದೇವರ ದಯೆಯಿಂದ ಸಂಪೂರ್ಣ ಗುಣಮುಖ ಆಗಿದ್ದೇನೆ. ವೈದ್ಯರು 6 ವಾರ ವಿಶ್ರಾಂತಿ ಹೇಳಿದ್ದಾರೆ. ಹಾಗಾಗಿ ಇನ್ನೆರಡು ವಾರಗಳಲ್ಲಿ ಪ್ರಯಾಣ ಆರಂಭಿಸಿ, ಸಾರ್ವಜನಿಕ ಜೀವನಕ್ಕೆ ಮರಳುತ್ತೇನೆ. ಕಳೆದ 25 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವೆ. ಜನರ ಮಧ್ಯೆಯೇ ನನ್ನ ದೈನಂದಿನ ಜೀವನ ನಡೆಯುತ್ತಿದೆ. ಈಗಲೂ ದೂರವಾಣಿ ಮೂಲಕ ಜನರ ಸಂಪರ್ಕದಲ್ಲಿರುವೆ. ಜನರ, ದೇವರ ಆಶೀರ್ವಾದದಿಂದ ಸಂಪೂರ್ಣ ಗುಣಮುಖ ಆಗಿದ್ದೇನೆ” ಎಂದು ಭಾವುಕರಾಗಿ ಹೇಳಿದರು.