ಕೋಲಾರ: ಇಂದು ನಾಡಿನಲ್ಲೆಡೆ ಈದ್ ಮಿಲಾದ್ ಸಂಭ್ರಮ ಮನೆ ಮಾಡಿದೆ.
ಮೆರವಣಿಗೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ ಉಂಟಾಗಿದ್ದು, ನಾಲ್ವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ನಗರದ ಕ್ಲಾಕ್ ಟವರ್ ಹತ್ತಿರ ನಡೆದಿದೆ. ಸೈಯದ್ ಸಲ್ಮಾನ್, ಸೈಯದ್ ಸೈಫ್, ಹುಸೇನ್ ಕಾಷಿಪ್, ಖಲೀಲ್ ಅಹ್ಮದ್ ಮೇಲೆ ಸೈಯದ್ ವಸೀಂ ಪಾಷಾ, ತಾಹೀರ್ ಗುಂಪಿನಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ. ಸದ್ಯ ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನರು ಅಲ್ಲಿ ಜಮಾಯಿಸಿದ್ದಾರೆ. ಸ್ಥಳಕ್ಕೆ ಕೋಲಾರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸದ್ಯ ಹಲ್ಲೆ ನಡೆಸಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಕ್ಲಾಕ್ ಟವರ್ ಹತ್ತಿರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.