ಕಾಂಗ್ರೆಸ್ ಪಂಚ ಗ್ಯಾರಂಟಿಗಳ ಮೂಲಕವೇ ಅಧಿಕಾರದ ಗದ್ದುಗೆ ಏರಿದ್ದು ಎಂಬುವುದು ಅಕ್ಷರಶಃ ಸತ್ಯ. ಲೋಕಸಭೆಯಲ್ಲಿಯೂ ಇದೇ ಅಸ್ತ್ರ ಇಟ್ಟುಕೊಂಡಿತ್ತಾದರೂ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಆದರೆ, ಲೋಕಸಭಾ ಚುನಾವಣೆಯಾದ ನಂತರದಿಂದ ಮಹಿಳೆಯರ ಅಕೌಂಟ್ ಗೆ ಈ ಗ್ಯಾರಂಟಿ ಬರುತ್ತಿಲ್ಲ. ಹೀಗಾಗಿ ಹಿಡಿಶಾಪ ಸರ್ಕಾರದ ವಿರುದ್ಧ ಬರುತ್ತಿವೆ.
ಹೌದು! ಎರಡು ತಿಂಗಳಿಂದ ಮಹಿಳೆಯರ ಅಕೌಂಟ್ ಗೆ ಹಣ ಬರುತ್ತಿಲ್ಲ. ಈಗ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ, ಶಕ್ತಿ ಯೋಜನೆಗಳು ಯಥಾಸ್ಥಿತಿಯಲ್ಲಿ ಮುಂದುವರೆದಿದ್ದು, ಗೃಹಲಕ್ಷ್ಮೀ, ಅನ್ನಭಾಗ್ಯ, ಯುವನಿಧಿ ಕುಂಟುತ್ತಾ ಸಾಗುತ್ತಿವೆ. ಹೀಗಾಗಿ ಜನರು ಸರ್ಕಾರದ ಪಂಚಕ್ಕೆ ಪಂಚ್ ನೀಡುವಂತಾಗುತ್ತಿದೆ.

ಮಹಿಳಾ ಸಬಲೀಕರಣ ಹಾಗೂ ಮಹಿಳಾ ಜೀವನಶೈಲಿಯ ಸುಧಾರಣೆಯ ಉದ್ದೇಶದೊಂದಿಗೆ ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆ ಘೋಷಿಸಿತ್ತು. ಆದರೆ, ಹಲವರಿಗೆ ಏಪ್ರಿಲ್ ವರೆಗೆ ಸಹಾಯಧನ ಬಂದಿದ್ದು, ಮೇ, ಜೂನ್ ತಿಂಗಳ ಹಣ ಇನ್ನೂ ಖಾತೆ ಸೇರಿಲ್ಲ. ಅದೇ ಅನ್ನಭಾಗ್ಯ ಯೋಜನೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಅಂತ್ಯೋದಯ ಅನ್ನಯೋಜನೆ ಪಡಿತರ ಚೀಟಿದಾರರಿಗೆ 35 ಕೆ.ಜಿ. ಆಹಾರ ಧಾನ್ಯ ನೀಡಿದರೆ, ಆದ್ಯತಾ ಪಡಿತರ ಚೀಟಿದಾರರ ಮನೆಯ ಪ್ರತಿ ಸದಸ್ಯನಿಗೆ 5 ಕೆ.ಜಿ. ಅಕ್ಕಿ ಉಚಿತವಾಗಿ ನೀಡಲಾಗುತ್ತಿತ್ತು. ವಿಧಾನಸಭಾ ಚುನಾವಣೆಯ ಬಳಿಕ ಆದ್ಯತಾ ಪ್ರತಿಫಲಾನುಭವಿಗೆ ಪ್ರತಿ ತಿಂಗಳು 5 ಕೆ.ಜಿ. ಅಕ್ಕಿಯ ಹಣವನ್ನು ಖಾತೆಗೆ ಜಮೆ ಮಾಡಲಾಗುತ್ತಿತ್ತು. ಈ ಹಣ ಏಪ್ರಿಲ್ ವರೆಗೆ ಸಮರ್ಪಕವಾಗಿ ಬಂದು ಬಿದ್ದಿದೆ. ಆದರೆ, ಆನಂತರ ಅದೂ ಬಂದಿಲ್ಲ. ಹೀಗಾಗಿ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಿರುದ್ಯೋಗಿ ಯುವ ಸಮುದಾಯಕ್ಕೆ ಯುವನಿಧಿ ಯೋಜನೆಯಡಿ ತಿಂಗಳಿಗೆ 3 ಸಾವಿರ ರೂ. ಸಹಾಯಧನ ನೀಡುವುದಾಗಿ ಘೋಷಿಸಿತ್ತು. ಆದರೆ, ಈಗ ಈ ಯೋಜನೆ ಹಾಗೂ ಯೋಚನೆಯನ್ನೇ ಮರೆತಂತಿದೆ. ರಾಜ್ಯದಲ್ಲಿ ಒಟ್ಟು 1.28 ಕೋಟಿ ಜನರಿಗೆ ಗೃಹಲಕ್ಷ್ಮೀ ಸಹಾಯಧನ ವಿತರಿಸಲಾಗುತ್ತಿದ್ದು, ಹಣ ಮಾತ್ರ ಬಂದಿಲ್ಲ. ಈಗಾಗಲೇ ವಿರೋಧ ಪಕ್ಷಗಳ ನಾಯಕರು ಇದನ್ನೇ ಅಸ್ತ್ರವಾಗಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳುತ್ತಿವೆ. ಸರ್ಕಾರ ಇದುವರೆಗೂ ಈ ಕುರಿತು ಚಕಾರವೆತ್ತಿಲ್ಲ. ಹಣ ಬಿಡುಗಡೆ ಮಾಡುತ್ತದೆಯೋ ಅಥವಾ ಯೋಜನೆಯನ್ನೇ ನಿಲ್ಲಿಸುತ್ತದೆಯೋ ನೋಡಬೇಕಿದೆ. ಆದರೆ, ಗೃಹಲಕ್ಷ್ಮೀಯರು ಮಾತ್ರ ಸರ್ಕಾರದ ವಿರುದ್ಧ ಗರಂ ಆಗಿದ್ದಂತೂ ಸಂತ್ಯ.
