ಗದಗ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಲ್ಲಿ ಗೃಹ ಲಕ್ಷ್ಮೀ ಯೋಜನೆ ಪ್ರಾಮುಖ್ಯತೆ ಪಡೆದಿದೆ. ಈ ಹಣವು ಮಹಿಳೆಯರಿಗೆ ಸಾಕಷ್ಟು ರೀತಿಯಲ್ಲಿ ಉಪಯೋಗವಾಗುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬರುತ್ತಲೇ ಇವೆ.
ಈಗ ಅತ್ತೆ-ಸೊಸೆ ಸೇರಿಕೊಂಡು ಈ ಹಣದಿಂದ ತಮ್ಮ ಹೊಲದಲ್ಲಿ ಬೋರ್ ವೆಲ್ ಕೊರೆಯಿಸಿದ್ದಾರೆ.
ರಾಜ್ಯ ಸರ್ಕಾರ ಪ್ರತಿ ತಿಂಗಳು ನೀಡುತ್ತಿರುವ 2 ಸಾವಿರ ರೂ. ಹಣದಿಂದ ಅತ್ತೆ- ಸೊಸೆ ಸೇರಿಕೊಂಡು ತಮ್ಮ ಹೊಲದಲ್ಲಿ ಬೋರ್ ವೆಲ್ ಕೊರೆಯಿಸಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ಅತ್ತೆ ಹಾಗೂ ಸೊಸೆ ಕೊಳವೆ ಬಾವಿ ಕೊರೆಯಿಸಿದ್ದಾರೆ. ಬೋರ್ ವೆಲ್ ನಲ್ಲಿ ಅವರಿಗೆ ನೀರು ಕೂಡ ಸಿಕ್ಕಿದ್ದು, ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತಿದ್ದಾರೆ.
ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಹರ್ಷ ವ್ಯಕ್ತಪಡಿಸಿ, ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತಿದ್ದಾರೆ. ಈಗಾಗಲೇ ಅತ್ತೆ ಹಾಗೂ ಸೊಸೆ ಸೇರಿದಂತೆ ಗೃಹಲಕ್ಷ್ಮಿ ಯೋಜನೆಯಿಂದ ದೊರೆತ 44 ಸಾವಿರ ರೂ. ಕೊಳವೆ ಬಾವಿ ಕೊರೆಸಲು ನೀಡಿದ್ದಾರೆ. ಕೊಳವೆ ಬಾವಿಗೆ ಒಟ್ಟು 60 ಸಾವಿರ ರೂ. ಖರ್ಚಾಗಿದೆ. ಈ ಪೈಕಿ ಗೃಹಲಕ್ಷ್ಮಿ ಯೋಜನೆಯ 44 ಸಾವಿರ ರೂ. ಬಳಕೆ ಮಾಡಿದ್ದಾರೆ. ಇನ್ನುಳಿದ್ದ ಹಣವನ್ನು ಮಗ ಹೊಂದಿಸಿದ್ದಾರೆ.
ಸದ್ಯ ಬೋರ್ ವೆಲ್ ಕೊರೆಯಿಸಿದ್ದರಿಂದ ನಮ್ಮ ಭೂಮಿ ಸದಾ ಹಸಿರಾಗಿರಲಿದೆ. ಇದರಿಂದ ನಮ್ಮ ಕುಟುಂಬ ನಿರ್ವಹಣೆಗೆ ದಾರಿ ಸಿಕ್ಕಂತಾಗಿದೆ ಎಂದು ಕುಟುಂಬಸ್ಥರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಾವು ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದಿದ್ದಾರೆ.