ಬೆಂಗಳೂರು: ಮೆಜೆಸ್ಟಿಕ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರದಿಂದ ಕೊನೆಗೂ ಗ್ರೀನ್ ಸಿಗ್ನಲ್ ದೊರೆತಿದೆ.
4,100 ಕೋಟಿ ರೂಪಾಯಿ ವೆಚ್ಚದ ಸಬ್ಅರ್ಬನ್ ರೈಲು ಯೋಜನೆಗೆ ರೈಲ್ವೆ ಇಲಾಖೆ ಅನುಮೋದನೆ ನೀಡಿದ್ದು, ಯೋಜನೆಯ ಅಂತಿಮ ವಿನ್ಯಾಸಕ್ಕೂ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ಸಮ್ಮತಿ ಸೂಚಿಸಿದೆ. ಒಟ್ಟು 8.5 ಕಿ.ಮೀ ರೈಲು ಮಾರ್ಗವಿದ್ದು, ಈ ಯೋಜನೆ 2030ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಬಹುಮುಖ್ಯವಾಗಿ ಈ ಯೋಜನೆಯಿಂದ ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದೆ.
ಈ ಯೋಜನೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಅನುದಾನ ನೀಡಲು ನಿರಾಕರಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಮತ್ತು ಭಾರತೀಯ ರೈಲ್ವೆಯಿಂದ ಈಕ್ವಿಟಿ ಹಣಕಾಸು ಪಡೆಯಲು ಪ್ರಯತ್ನಗಳು ನಡೆಯುತ್ತಿವೆ. ಯೋಜನೆಯ ವರದಿಯನ್ನು ರೈಟ್ಸ್ ಸಂಸ್ಥೆ ಸಿದ್ಧಪಡಿಸಿದ್ದು, ಈ ಸಂಪೂರ್ಣ ಸಂಪಿಗೆ ಲೈನ್ ಮತ್ತು ವಿಮಾನ ನಿಲ್ದಾಣದ ಕೊಂಡಿಯನ್ನು ಮಾರ್ಚ್ 2030ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಈ ಮಾರ್ಗ ಕೆಎಸ್‌ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ ಯಲಹಂಕ ಮೂಲಕ ಸಾಗಿ, ಟ್ರಂಪೆಟ್ ಇಂಟರ್‌ಚೇಂಜ್ ಬಳಿ ತಿರುವು ಪಡೆದು, ಬಿಕೆ ಹಳ್ಳಿ ಮತ್ತು ಏರೋಸ್ಪೇಸ್ ಪಾರ್ಕ್ ಮೂಲಕ ದೇವನಹಳ್ಳಿ ಏರ್‌ಪೋರ್ಟ್ ಟರ್ಮಿನಲ್ ತಲುಪಲಿದೆ.
ಇದನ್ನೂ ಓದಿ; ಚಾಮರಾಜನಗರ | 50 ಸಾವಿರಕ್ಕೆ ಹೆಣ್ಣು ಮಗು ಮಾರಾಟ ; ತಂದೆ-ತಾಯಿ ಸೇರಿ ಐವರು ಅರೆಸ್ಟ್


















