ಬೆಂಗಳೂರು: ಜನರ ರಕ್ಷಣೆಗೆ ಬರಬೇಕಾದ ರಾಜ್ಯ ಸರ್ಕಾರವು ದೌರ್ಜನ್ಯ ಎಸಗುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಸಂಜೆ 5 ಗಂಟೆಯ ವರೆಗೆ ವಸೂಲಿ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.
ಮಲ್ಲೇಶ್ವರಂ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಿಗ್ಗೆ 10ರಿಂದ 5 ಗಂಟೆ ವರೆಗೆ ಹೋಗಿ ಎಂಬ ಮಾತನ್ನು ರಾಜ್ಯ ಸರಕಾರ ಹೇಳುತ್ತಿರುವುದು ದುರ್ದೈವ ಎಂದು ಟೀಕಿಸಿದ್ದಾರೆ. ಒಂದು ಕಡೆ ತಮ್ಮ ಗ್ಯಾರಂಟಿಗಳಿಂದ ರಾಜ್ಯದಲ್ಲಿ ಜನರು ಸಮೃದ್ಧರಾಗಿದ್ದಾರೆ. ಆಲ್ ಈಸ್ ವೆಲ್ ಎಂದು ಹೇಳಿಕೊಳ್ಳುತ್ತಾರೆ. ಮತ್ತೊಂದು ಕಡೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದೌರ್ಜನ್ಯ ಮತ್ತು ಭರಾಟೆಯಿಂದ ರಾಜ್ಯದಲ್ಲಿ ಬಡವರು, ಮಹಿಳೆಯರು, ಕೂಲಿ ಕಾರ್ಮಿಕರು ತತ್ತರಿಸಿ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವ್ಯೂಹಕ್ಕೆ ಬಡವರು ಸಿಲುಕಿದ್ದಾರೆ. ರಾಜ್ಯ ಸರ್ಕಾರವು ದೌರ್ಜನ್ಯಕ್ಕೆ ಅವಕಾಶ ಕೊಡುವುದನ್ನು ಬದಿಗಿಟ್ಟು ಮುಗ್ಧ ಬಡ ಜನರ- ರೈತರ ರಕ್ಷಣೆಗೆ ನಿಲ್ಲಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಅನುದಾನ ಇಲ್ಲದೆ ಶಾಸಕರು ಅಭಿವೃದ್ಧಿ ರಹಿತ ಕ್ಷೇತ್ರದೊಂದಿಗೆ ಕೈಕಟ್ಟಿ ಕುಳಿತಿರುವ ದಾರುಣ ಪರಿಸ್ಥಿತಿ ಇದೆ. ರೈತರ ಗೋಳು ಸರ್ಕಾರ ಕೇಳುತ್ತಿಲ್ಲ. ಹಗಲು ದರೋಡೆ, ಕೊಲೆ, ಅತ್ಯಾಚಾರ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿದೆ. ಇದಲ್ಲದೇ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯ ಕುರಿತು ಬಹಳಷ್ಟು ಚರ್ಚೆ ಆಗುತ್ತಿದೆ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ವಸೂಲಾತಿ ದೌರ್ಜನ್ಯದಿಂದ ಭಯಭೀತರಾಗಿ ಹಣ ಮರುಪಾವತಿ ಮಾಡಲು ಸಾಧ್ಯವಾಗದೆ ಪ್ರಾಣ ಕಳಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ದೆಹಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವ ವಿಶ್ವಾಸವಿದೆ. ದೆಹಲಿ ರಾಜ್ಯದ ಚುನಾವಣೆ ನಿನ್ನೆ ನಡೆದಿದೆ. 9-10 ಸಮೀಕ್ಷೆಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಂತೆ 27 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರಿಂದ ಕೇಂದ್ರದ ಬಜೆಟ್ ಬಗ್ಗೆ ಒಳ್ಳೆಯ ಮಾತು ಕೇಳಲು ಸಾಧ್ಯವಿಲ್ಲ. ಸಹಜವಾಗಿ ಅವರು ಟೀಕೆಗಳನ್ನು ಮಾಡಿದ್ದಾರೆ. ಕರ್ನಾಟಕವೂ ಸೇರಿದಂತೆ ದೇಶದ ಪ್ರತಿಯೊಂದು ರಾಜ್ಯದಲ್ಲೂ ಈ ಬಜೆಟ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ನುಡಿದರು.
ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಶಾಸಕ ಶೈಲೇಂದ್ರ ಬೆಲ್ದಾಳೆ, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿ ಗೌಡ, ಉತ್ತರ ಜಿಲ್ಲಾ ಅಧ್ಯಕ್ಷ ಹರೀಶ್ ಈ ಸಂದರ್ಭದಲ್ಲಿದ್ದರು.