ಬೆಂಗಳೂರು : 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಇಂದು(ಮಂಗಳವಾರ, ಆ.19) ಅಂಗೀಕರಿಸಲಾಯಿತು.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಸದನದಲ್ಲಿ ಈ ಮಸೂದೆಯನ್ನು ಮಂಡಿಸಿದರು. ವಿರೋಧ ಪಕ್ಷದ ನಾಯಕರು, ಶಾಸಕರು ಚರ್ಚೆ ನಡೆಸಿದ ಬಳಿಕ ಅನುಮೋದನೆ ನೀಡಲಾಯಿತು.
ಈ ವೇಳೆ ಸದನವನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಶಿವಕುಮಾರ್, “ಮಸೂದೆ ಅಂಗೀಕಾರಗೊಂಡಿದ್ದರೂ ಕೆಲವರು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಹೀಗಾಗಿ ಈ ಮಸೂದೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಂವಿಧಾನದ 74ನೇ ತಿದ್ದುಪಡಿ ಅಡಿಯಲ್ಲಿ ಬರುವ ಪಾಲಿಕೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ತಿದ್ದುಪಡಿಯ ಉದ್ದೇಶ ಹಾಗೂ ಇದರ ಪರಿಣಾಮವೇನು ಎಂಬ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, “ಈಗ ಜಾರಿಯಲ್ಲಿರುವ ಕಾಯ್ದೆ ಅನುಸಾರ ಜಿಬಿಎ ಅಡಿಯಲ್ಲಿ ರಚಿಸಲಾಗಿರುವ ಪಾಲಿಕೆಗಳ ವಿಚಾರದಲ್ಲಿ ಪ್ರಾಧಿಕಾರ ಹಸ್ತಕ್ಷೇಪ ಮಾಡಲು ಅವಕಾಶವಿದೆ ಎಂದು ಯಾರೋ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಪಾಲಿಕೆಗಳನ್ನು ಸರಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಅಂಶವನ್ನು ಪ್ರಸ್ತುತ ತಿದ್ದುಪಡಿ ವಿಧೇಯಕದಲ್ಲಿ ತೆಗೆದು ಹಾಕಲಾಗಿದೆ. ಪಾಲಿಕೆಗಳನ್ನು ಸರಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಿಲ್ಲ. ಪಾಲಿಕೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿವೆ. ಪಾಲಿಕೆಗಳ ಕಾರ್ಯಚಟುವಟಿಕೆಯಲ್ಲಿ ಜಿಬಿಎ ಹಸ್ತಕ್ಷೇಪ ಇಲ್ಲ ಎಂಬ ಸ್ಪಷ್ಟನೆ ನೀಡಲು ಈ ತಿದ್ದುಪಡಿ ತರಲಾಗಿದೆ’ ಎಂದು ತಿಳಿಸಿದ್ದಾರೆ.