ಬೆಂಗಳೂರು: ಇಂಟಿಗ್ರೇಟೆಡ್ ಟೌನ್ ಶಿಪ್ ಯೋಜನೆಯನ್ನು ಕುಮಾರಸ್ವಾಮಿ ಅವರು ಸಿಎಂ ಆದಾಗ ಪೈಲೆಟ್ ಪ್ರಾಜೆಕ್ಟ್ ಗಾಗಿ ಮಾಡಿದ್ದರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ಲೋಗೋ ಅನಾವರಣ ಮಾಡಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ, ಈ ಯೋಜನೆಗೆ 25 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಈ ಹಿಂದೆ ಬಿಜೆಪಿ ಜೆಡಿಎಸ್ ಸರ್ಕಾರ ಇದನ್ನು ನಿರ್ಲಕ್ಷಿಸಬಹುದಿತ್ತು. ಈಗ ನಮಗೆ ಇದನ್ನು ಡಿನೋಟಿಫಿಕೇಷನ್ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಾಗಿ, ಇಲ್ಲಿ ಹೊಸ ಉದ್ಯೋಗ ಸೃಷ್ಠಿಸಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.
ಬೈರಮಂಗಲ ಕೆರೆಯನ್ನು ಸಾವಿರ ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಮುಂದಾಗಿದ್ದು, ಹಾಗೂ 26 ಹಳ್ಳಿಗಳನ್ನು ಅಭಿವೃದ್ಧಿ ಮಾಡಲು ಮುಂದಾಗಿದ್ದೇವೆ. ಜಮೀನು ಸ್ವಾಧೀನ ಆದ ರೈತರು ಹಣ ಪಡೆಯದೇ ಇದ್ದರೇ 50*50 ರೆಷ್ಯೂ ನಲ್ಲಿ ಸೈಟ್ ಗಳನ್ನು ನೀಡುವ ಐತಿಹಾಸಿಕ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಗಾಗಿ 300 ಮೀಟರ್ ಬ್ಯುಸಿನೆಸ್ ಕಾರಿಡಾರ್ ಮಾಡಲಾಗಿದ್ದು, ಇದಕ್ಕಾಗಿ ಕೂಡ ಭೂಸ್ವಾಧೀನ ಮಾಡುತ್ತೇವೆ. ಭೂಸ್ವಾಧೀನಕ್ಕಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಕೂಡ ಮನವಿ ಮಾಡಿದ್ದಾರೆ. ಅವರಿಗೂ ಕೂಡ ಅಭಿನಂದನೆ ಸಲ್ಲಿಸುತ್ತೇನೆ. 10 ಸಾವಿರ ಕೋಟಿ ಭೂಸ್ವಾಧೀನ ಮಾಡಿಕೊಂಡು 15 ಸಾವಿರ ಕೋಟಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.