ಹಾಸನ : ಹಾಸನಾಂಬೆ ಹಾಗೂ ಸಿದ್ದೇಶ್ವರ ದರ್ಶನೋತ್ಸವಕ್ಕೆ ನಿರಂತರ ಮಳೆಯ ಮಧ್ಯೆಯೂ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಜಿಲ್ಲಾಡಳಿತದೊಂದಿಗೆ ಸಂಘ, ಸಂಸ್ಥೆಗಳು ಹಾಗೂ ಹಾಸನಾಂಬೆ ಮಕ್ಕಳು ತಂಡದ ಸದಸ್ಯರು ಕೈ ಜೋಡಿಸಿದ್ದು, ಸಕಲ ಸಿದ್ಧತೆ ನಡೆಯುತ್ತಿದೆ. ವರ್ಷಕ್ಕೆ ಒಂದು ಬಾರಿ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲು ಅ. 24 ರಂದು ಮಧ್ಯಾಹ್ನ 12 ಕ್ಕೆ ತೆರೆಯಲಿದೆ. ನ. 3 ರಂದು ದರ್ಶನೋತ್ಸವಕ್ಕೆ ತೆರೆ ಬೀಳಲಿದೆ. ಕೇವಲ 9 ದಿನಗಳಷ್ಟೇ ತಾಯಿ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಲಿದ್ದಾರೆ. ಪ್ರಥಮ ಹಾಗೂ ಅಂತಿಮ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಹೀಗಾಗಿ 7 ದಿನಗಳಲ್ಲಿ ಭಕ್ತರು ತಾಯಿಯ ದರ್ಶನ ಮಾಡುತ್ತಾರೆ. ಈ ಅವಧಿಯಲ್ಲಿ ಸುಮಾರು 15 ಲಕ್ಷದಷ್ಟು ಭಕ್ತರು ತಾಯಿಯ ದರ್ಶನ ಮಾಡುತ್ತಿರುತ್ತಾರೆ.
ಸದ್ಯ ಉತ್ಸವದ ಹಿನ್ನೆಲೆಯಲ್ಲಿ ದೇಗುಲದ ಆವರಣ ಅಲಂಕೃತಗೊಳಿಸಲಾಗುತ್ತಿದೆ. ರಾಜಗೋಪುರ ಹಾಗೂ ಬಾಗಿಲಿಗೆ ಬಣ್ಣ ಹಚ್ಚಲಾಗಿದ್ದು ದೇವಾಲಯ ಕಂಗೊಳಿಸುತ್ತಿದೆ. ದ್ವಾರದಲ್ಲಿ ತಾತ್ಕಾಲಿಕ ಮಂಟಪ ನಿರ್ಮಿಸುವ ಕೆಲಸ ನಡೆಯುತ್ತಿದೆ.
ವ ವಿದ್ಯುತ್ ದೀಪಾಲಂಕಾರ ಕೆಲಸ ಕೂಡ ಆರಂಭವಾಗಿದೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಬಿಎಂ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ನಗರ ಹಾಗೂ ಬಡಾವಣೆಯ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲಾಗುತ್ತಿದ್ದು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲದೇ, ವಿವಿಧ ಪ್ರದರ್ಶನಗಳಿಗೂ ಸಿದ್ಧತೆ ನಡೆಯುತ್ತಿದೆ.