ಬೆಂಗಳೂರು: ಅಣ್ಣಾವ್ರ ಹುಟ್ಟು ಹಬ್ಬದಂದು ಮೊಮ್ಮಗಳು ನಾಡಿನ ಜನತೆಗೆ ವಿಶೇಷ ಗಿಫ್ಟ್ ನೀಡಲು ಮುಂದಾಗಿದ್ದಾರೆ.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಶಿವರಾಜಕುಮಾರ್ ಒಡೆತನದ ‘ಶ್ರೀ ಮುತ್ತು ಸಿನಿ ಸರ್ವೀಸಸ್ ಆಂಡ್ ಪ್ರೊಡಕ್ಷನ್ಸ್’ ಬ್ಯಾನರ್ ನಿರ್ಮಾಣದ ಚೊಚ್ಚಲ ಚಲನಚಿತ್ರ “ಫೈರ್ ಫ್ಲೈ” ಈಗಾಗಲೇ ಟೀಸರ್ ಮೂಲಕ ಜನರ ಮನ ಗೆದ್ದಿದೆ. ಈ ಚಿತ್ರವನ್ನು ಏಪ್ರಿಲ್ 24ರಂದು ವರನಟ ಡಾ. ರಾಜಕುಮಾರ್ ಅವರ ಜನ್ಮದಿನದಂದು ತೆರೆಗೆ ತರಲು ನಿರ್ಧರಿಸಲಾಗಿದೆ.
ʼಫೈರ್ ಫ್ಲೈ’ ಚಿತ್ರದಲ್ಲಿ ವಂಶಿ ಹೀರೋ ಆಗಿ ನಟಿಸಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಅವರದ್ದೇ ಎಂಬುವುದು ವಿಶೇಷ. ಆಚ್ಯುತ್ ಕುಮಾರ್, ಸುಧಾರಾಣಿ, ರಚನಾ ಇಂದರ್, ಶೀತಲ್ ಶೆಟ್ಟಿ, ಆನಂದ್ ನೀನಾಸಂ, ಚಿತ್ಕಲಾ ಬಿರಾದರ್, ಮೂಗು ಸುರೇಶ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಸಿಕೊಂಡಿದ್ದಾರೆ.
ಡಾ. ಶಿವರಾಜ್ ಕುಮಾರ್ ಮಾತನಾಡಿ, ‘ಅಪ್ಪಾಜಿ ಅವರ ಹುಟ್ಟು ಹಬ್ಬದಂದು ನನ್ನ ಮಗಳ ಮೊದಲ ಚಿತ್ರ ಬಿಡುಗಡೆಯಾಗುತ್ತಿರುವುದು ನನಗೆ ತುಂಬಾ ವಿಶೇಷವಾದ ಕ್ಷಣ. ನಮ್ಮ ಕುಟುಂಬದ ಮೇಲೆ ಜನರು ತೋರಿಸಿರುವ ಎಲ್ಲ ಪ್ರೀತಿ ಅಪ್ಪಾಜಿಯವರಿಂದ ಬಂದಿದೆ. ಮುಂದಿನ ಪೀಳಿಗೆಯ ಮೇಲೆ ಎಲ್ಲರೂ ಅದೇ ಪ್ರೀತಿಯನ್ನು ತೋರಿಸುವುದನ್ನು ನೋಡುವುದು ತುಂಬಾ ಖುಷಿ ಕೊಟ್ಟಿದೆ. ಎಲ್ಲಾ ಅಭಿಮಾನಿಗಳು ಮತ್ತು ಕನ್ನಡ ಸಿನಿಮಾ ಪ್ರೇಮಿಗಳ ನಿರಂತರ ಬೆಂಬಲಕ್ಕೆ ಧನ್ಯವಾದಗಳು ಎಂದಿದ್ದಾರೆ.
ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜಯರಾಮ್ ಶ್ರೀನಿವಾಸ್ ಹಾಗೂ ಹ್ಯಾಪಿ ಹನುಮಂತ್ ಅವರ ಸಹ-ನಿರ್ದೇಶನ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ರಘು ನಿಡುವಳ್ಳಿ ಅವರ ಸಂಭಾಷಣೆ, ಸುರೇಶ್ ಆರ್ಮುಗಮ್ ಅವರ ಸಂಕಲನ, ವರದರಾಜ್ ಕಾಮತ್ ಅವರ ಕಲೆ, ಅರ್ಜುನ್ ರಾಜ್ ಅವರ ಸಾಹಸ, ರಾಹುಲ್ ಮಾಸ್ಟರ್ ಅವರ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ.