ಬೆಂಗಳೂರು: 120 ಗ್ರಾಂ ಚಿನ್ನ ಕಳ್ಳತನ ಆರೋಪದ ಹಿನ್ನೆಲೆಯಲ್ಲಿ 11 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ವಿಡಿಯೋ ಮಾಡಿಸಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವಿರುದ್ಧ ಕೇಳಿಬಂದಿದೆ.
ವಿನಾಯಕ ಲೇಔಟ್ ಶಾಂತಿಪುರದಲ್ಲಿ ಡ್ರೈ ಕ್ಲೀನಿಂಗ್ ಅಂಗಡಿ ನಡೆಸುತ್ತಿರುವ ಬಾಲಾಜಿ ಅವರ 11 ವರ್ಷದ ಮಗ ಈ ಪ್ರಕರಣದ ಕೇಂದ್ರಬಿಂದುವಾಗಿದ್ದಾನೆ. ಆರೋಪದಂತೆ, ಆರನೇ ತರಗತಿ ವಿದ್ಯಾರ್ಥಿಯಾಗಿರುವ ಬಾಲಕನನ್ನು ಠಾಣೆಗೆ ಕರೆಸಿ, ಪೋಷಕರ ಮುಂದೆಯೇ ಹಲ್ಲೆ ನಡೆಸಲಾಗಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಮಹಿಳೆಯೊಬ್ಬರು ಆಟೋದಲ್ಲಿ ಮನೆಗೆ ಆಗಮಿಸುವ ವೇಳೆ ಬಾಲಾಜಿ ಅವರ ಡ್ರೈ ಕ್ಲೀನಿಂಗ್ ಅಂಗಡಿ ಬಳಿ ನಿಂತಿದ್ದಾರೆ. ಆ ಸಮಯದಲ್ಲಿ ಅಂಗಡಿಯಲ್ಲಿ ಬಾಲಾಜಿ ಅವರ ಮಗ ಮೊಬೈಲ್ ನೋಡುತ್ತ ಕುಳಿತಿದ್ದನು. ಪರಿಚಯಸ್ಥೆ ಎಂದು ತಿಳಿದುಕೊಂಡು ಮಹಿಳೆ ಬಾಲಕನಿಗೆ 10 ರೂ. ನೀಡಿದ್ದು, ಬಳಿಕ ತಮಿಳುನಾಡಿನ ಕೃಷ್ಣಗಿರಿಗೆ ಬಸ್ ಮೂಲಕ ತೆರಳಿದ್ದಾರೆ. ಆರು ದಿನಗಳ ನಂತರ ವಾಪಸ್ ಬಂದ ಮಹಿಳೆ, ತನ್ನ ಪರ್ಸ್‌ನಲ್ಲಿ ಇದ್ದ 120 ಗ್ರಾಂ ಚಿನ್ನ ಕಳುವಾಗಿದೆ ಎಂದು ದೂರು ದಾಖಲಿಸಿದ್ದಾರೆ. ಪರ್ಸ್ ಕಳ್ಳತನಕ್ಕೆ ಇದೇ ಬಾಲಕ ಕಾರಣ ಎಂದು ಆರೋಪಿಸಿದ್ದಾರೆ.
ದೂರು ಹಿನ್ನೆಲೆಯಲ್ಲಿ ಪೊಲೀಸರು ಬಾಲಕನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಬಾಲಕ ಚಿನ್ನ ಕದ್ದಿಲ್ಲ ಎಂದು ಹೇಳಿದ ನಂತರ, ಪೊಲೀಸರು ಆತನನ್ನು ಮನೆಗೆ ಕಳುಹಿಸಿದ್ದರು. ಆದರೆ ಆರು–ಏಳು ತಿಂಗಳು ಯಾವುದೇ ಬೆಳವಣಿಗೆ ಇಲ್ಲದೆ ಇದ್ದ ಪ್ರಕರಣದಲ್ಲಿ ಇದೀಗ ಮತ್ತೆ ಮಹಿಳೆ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಾಲಕ ಹಾಗೂ ಬಾಲಾಜಿ ದಂಪತಿಯನ್ನು ಮತ್ತೆ ಠಾಣೆಗೆ ಕರೆಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಠಾಣೆಯಲ್ಲಿ ಬಾಲಕನ ಮೇಲೆ ಹಲ್ಲೆ ನಡೆಸಿ, ಲೈಟ್ ಆಫ್ ಮಾಡಿ ಹೆದರಿಸಿ, ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ನಾನೇ ಚಿನ್ನವಿದ್ದ ಪರ್ಸ್ ಕದ್ದಿದ್ದೇನೆ ಎಂದು ಹೇಳಿಸುವಂತೆ ಬಲವಂತವಾಗಿ ವಿಡಿಯೋ ಮಾಡಿಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಚಿನ್ನವನ್ನು ತಂದು ಕೊಡದಿದ್ದರೆ ಪೋಷಕರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗಿದೆ.
ಪೊಲೀಸರು ಮಾಡಿದ ಹಲ್ಲೆಯಿಂದ ಬಾಲಕನ ಕಿವಿಗೆ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಘಟನೆಗಳಿಂದ ಭಯಭೀತಗೊಂಡಿರುವ ಪೋಷಕರು ಕಣ್ಣೀರು ಹಾಕುತ್ತ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ಇದನ್ನೂ ಓದಿ : ಮೈಸೂರಿನಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ | ವ್ಹೀಲಿಂಗ್ ಮಾಡಬೇಡಿ ಎಂದಿದ್ದಕ್ಕೆ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಕಿಡಿಗೇಡಿಗಳು!



















