ಉಡುಪಿ: ಹೊಸ ವರ್ಷದ ಮೊದಲ ದಿನವೇ ಮಾನಸಿಕ ಕಿರುಕುಳಕ್ಕೆ ಬೇಸತ್ತ ಗ್ರಾಪಂ ಸಿಬ್ಬಂದಿ ಸಾಮೂಹಿಕ ರಾಜೀನಾಮೆ ನೀಡಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ತಾಲೂಕಿನ ಬೈರಂಪಳ್ಳಿ ಗ್ರಾಪಂನಲ್ಲಿ ಈ ಘಟನೆ ನಡೆದಿದೆ. ಗ್ರಾಪಂ ಸದಸ್ಯ ಸಂತೋಷ್ ಹಾಗೂ ಪಿಡಿಒ ಕಿರುಕುಳುಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ರಾಜೀನಾಮೆ ಪತ್ರವನ್ನು ಡಿ. 19ರಂದು ಪಂಚಾಯತ್ ಅಧ್ಯಕ್ಷರಿಗೆ ನೀಡಿದ್ದಾರೆ. ಹೀಗಾಗಿ ಇಂದು ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬೈರಂಪಳ್ಳಿ ಗ್ರಾಪಂ ಬಿಲ್ ಕಲೆಕ್ಟರ್ ಸುಮನಾ, ಕ್ಲರ್ಕ್, ಡಿಇಒ ವಾಸಂತಿ, ಪಂಪು ಚಾಲಕ ಮನೋಹರ್ ರಾಜೀನಾಮೆ ನೀಡಿದ್ದಾರೆ. ಭವಿಷ್ಯ ಮತ್ತು ಆರೋಗ್ಯದ ಚಿಂತೆಯಿಂದ ರಾಜೀನಾಮೆ ನೀಡುತ್ತಿದ್ದೇವೆ ಎಂದು ಸಿಬ್ಬಂದಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಂತರ ಉಡುಪಿ ತಾಲೂಕು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭೇಟಿ ನೀಡಿ ಪಂಚಾಯತ್ ಬಾಗಿಲು ತೆರೆದು, ಜನ ಸೇವೆಗೆ ಅವಕಾಶ ಕಲ್ಪಿಸಿದ್ದಾರೆ. ಜಿಲ್ಲಾಡಳಿತ ಈ ವಿವಾದದಲ್ಲಿ ಮಧ್ಯಪ್ರವೇಶಿಸಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.