ಕಾಪು: ಹವಾಮಾನ ವೈಪರೀತ್ಯದಿಂದ ಮೀನುಗಾರರ ದೋಣಿ ಮತ್ತು ಜೀವಕ್ಕೆ ಅಪಾಯವಿದ್ದ ಸಂದರ್ಭವಿದ್ದಲ್ಲಿ ಸಂರಕ್ಷಣಾ ಪಡೆಗೆ ತತ್‌ಕ್ಷಣ ಮಾಹಿತಿ ರವಾನಿಸು ಉದ್ದೇಶದಿಂದ ಇಸ್ರೋ ಅಭಿವೃದ್ಧಿ ಪಡಿಸುವ ಜಿ.ಪಿ.ಎಸ್ ಆಧಾರಿತ ದ್ವಿಮುಖ ಸಂವಹನ ಸಾಧನಗಳನ್ನು ಎಲ್ಲಾ ಯಾಂತ್ರೀಕೃತ ಮತ್ತು ಮೋಟರೀಕೃತ ಮೀನುಗಾರಿಕಾ ದೋಣಿಗಳಿಗೆ ಅಳವಡಿಸಲಾಗುತ್ತಿದೆ ಎಂದು ಮೀನುಗಾರಿಕಾ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದ್ದಾರೆ.
ಬಂದರು ಪ್ರದೇಶಗಳಲ್ಲಿ ಹೂಳು ತುಂಬಿ ಅಳಿವೆ ಬಾಗಿಲುಗಳಲ್ಲಿ ಬ್ರೇಕ್ ವಾಟರ್ ವಿಸ್ತರಣೆಯಾಗದೇ ಮೀನುಗಾರಿಕಾ ದೋಣಿ, ಬೋಟ್‌ಗಳು ಅವಘಡಕ್ಕೀಡಾಗಿ ಮೀನುಗಾರರು ಪ್ರಾಣ ಕಳೆದುಕೊಳ್ಳುತ್ತಿರುವುದು, ಜೀವ ರಕ್ಷಕ ಜಾಕೆಟ್‌ಗಳನ್ನು ಒದಗಿಸುವುದು ಹಾಗೂ ಹವಾಮಾನ ವೈಪರೀತ್ಯ ಮಾಹಿತಿ ಸಂಬಂಧ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮೀನುಗಾರರಿಗೆ ಹವಾಮಾನ ಮುನ್ನೆಚ್ಚರಿಕಾ ವರದಿಗಳನ್ನು ನೀಡಲಾಗುತ್ತಿದೆ ಎಂದಿದ್ದಾರೆ.
ಬಂದರು ಪ್ರದೇಶದಲ್ಲಿ ತುಂಬಿದ ಹೂಳು ಹಾಗೂ ಬಂದರು ಪ್ರವೇಶಿಸುವ ಅಳಿವೆ ಬಾಗಿಲಲ್ಲಿ ಬ್ರೇಕ್ ವಾಟರ್ ವಿಸ್ತರಣೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನದಿಂದ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಬ್ರೇಕ್ ವಾಟರ್ ವಿಸ್ತರಣೆ ಕುರಿತು ಸೆಂಟ್ರಲ್ ವಾಟರ್ ಆ್ಯಂಡ್ ಪವರ್ ರಿಸರ್ಚ್ ಸ್ಟೇಶನ್ ಪುಣೆ ಮತ್ತು ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಕೋಸ್ಟಲ್ ಎಂಜಿನಿಯರಿಂಗ್ ಫಾರ್ ಫಿಶರೀಸ್ ಬೆಂಗಳೂರು ಇವರ ಶಿಫಾರಸು ಆಧರಿಸಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.



















