ಬೆಂಗಳೂರು: ರಾಜ್ಯ ಸರ್ಕಾರ ದಿವಾಳಿ ಆಗಿದೆ. ತಾನೇ ಜಾರಿಗೆ ತಂದ ಗ್ಯಾರಂಟಿಗಳನ್ನು ಮುನ್ನಡೆಸಿಕೊಂಡು ಹೋಗಲು ಆಗುತ್ತಿಲ್ಲ. ಈಗ ಗ್ಯಾರಂಟಿಗಳಿಗೆ ಹಣ ಇಲ್ಲದ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ ರದ್ದು ಮಾಡಲು ಹೊರಟಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 60 ಲಕ್ಷ ರೇಷನ್ ಕಾರ್ಡ್ ರದ್ದುಪಡಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಹೀಗಾಗಿ ಜನರಿಗೆ ರೇಷನ್ ಕಾರ್ಡ್ ಹೋಗುವ ಭಯ ಕಾಡುತ್ತಿದೆ. 60 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಿದರೆ, ಸರ್ಕಾರಕ್ಕೆ ಪ್ರತಿ ತಿಂಗಳು ನಾಲ್ಕು ಸಾವಿರ ಕೋಟಿ ರೂ. ಹಣ ಉಳಿಯುತ್ತದೆ. ಹೀಗಾಗಿಯೇ ಜನರಿಗೆ ಈ ರೀತಿ ವಂಚಿಸಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನೊಂದೆಡೆ ಬಿಜೆಪಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ. ಕಾಂಗ್ರೆಸ್ ಆಡಳಿತದಲ್ಲಿ ಉದ್ಯಮವೂ ಇಲ್ಲ, ಉದ್ಯೋಗವೂ ಇಲ್ಲ! ನಮ್ಮ ಬಿಜೆಪಿ ಸರ್ಕಾರದ ಆಡಳಿತದ ನೀತಿ, ನಾವು ರಾಜ್ಯದಲ್ಲಿ ಮೂಡಿಸಿದ್ದ ಉದ್ಯಮಸ್ನೇಹಿ ವಾತಾವರಣದಿಂದ ಇಡೀ ಭಾರತದಲ್ಲೇ ಅತಿ ಹೆಚ್ಚಿನ ವಿದೇಶೀ ಬಂಡವಾಳ ಹೂಡಿಕೆ ನಮ್ಮ ಕರ್ನಾಟಕಕ್ಕೆ ಹರಿದು ಬಂದಿತ್ತು.
ಕೋವಿಡ್ ಮಹಾಮಾರಿಯಿಂದ ತತ್ತರಿಸಿ ಆರ್ಥಿಕವಾಗಿ ಕುಸಿದ ಸಮಯದಲ್ಲೂ ನಮ್ಮ ಆಡಳಿತ ವೈಖರಿಯಿಂದ ಅವೆಲ್ಲವನ್ನೂ ಸವಾಲಾಗಿ ಸ್ವೀಕರಿಸಿ ಎಫ್‌ಡಿಐ ನೀತಿ ಸುಧಾರಣೆಗಳ ಕುರಿತು ನಾವು ಕೈಗೊಂಡ ಕ್ರಮಗಳಿಂದ ಕರ್ನಾಟಕವನ್ನು ಎಫ್‌ಡಿಐ ನಲ್ಲಿ ದೇಶದಲ್ಲಿಯೇ ನಂಬರ್-1 ಸ್ಥಾನಕ್ಕೆ ಏರಿಸಿದ್ದೆವು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರದ ಅಸಮರ್ಥ ಆಡಳಿತದಿಂದ ಉದ್ಯಮಗಳಿಗೆ ಸರಿಯಾದ ಮೂಲಸೌಕರ್ಯ ಕಲ್ಪಿಸದೇ ಹಲವಾರು ಉದ್ಯಮಗಳು ರಾಜ್ಯ ತೊರೆದು ಬೇರೆ ಕಡೆ ಹೋದವು. ಹಾಗೂ ಉದ್ಯಮಿಗಳ ಕುರಿತ ಕಡೆಗಣನೆಯಿಂದ ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ತಗ್ಗಿದ ಪರಿಣಾಮ ಕರ್ನಾಟಕವು ಇಂದು ಎರಡನೇ ಸ್ಥಾನಕ್ಕೆ ಕುಸಿದಿದೆ’ ಎಂದು ಟ್ವೀಟ್ ಮೂಲಕ ಟೀಕಿಸಿದೆ.