ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಅದರಲ್ಲೂ, ಕೇಂದ್ರ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ದೇಶದ ಹೆದ್ದಾರಿಗಳಿಗೆ (National Highways) ಹೊಸ ಚಹರೆಯನ್ನೇ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಅವರನ್ನು “ಹೈವೇ ಮ್ಯಾನ್ ಆಫ್ ಇಂಡಿಯಾ” (Highway Man Of India) ಎಂದು ಕರೆಯಲಾಗುತ್ತದೆ. ಈಗ ಕೇಂದ್ರ ಸರ್ಕಾರವು 2025-26ನೇ ಹಣಕಾಸು ವರ್ಷದಲ್ಲಿ ದೇಶಾದ್ಯಂತ 10 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಗುರಿ ಹೊಂದಿದೆ.
ಹಾಗೆ ನೋಡಿದರೆ, ಕಳೆದ ಏಳು ವರ್ಷಗಳಲ್ಲೇ ಕೇಂದ್ರ ಸರ್ಕಾರವು ರಸ್ತೆ ನಿರ್ಮಾಣದಲ್ಲಿ ಕನಿಷ್ಠ ಗುರಿ ನಿಗದಿಪಡಿಸಿದೆ. 2018-19ರ ಬಳಿಕ ಕನಿಷ್ಠ ಗುರಿ ನಿಗದಿಪಡಿಸಿದೆ. 2019-20ರಲ್ಲಿ 10,237 ಕಿ.ಮೀ ಹೆದ್ದಾರಿ ನಿರ್ಮಿಸಲಾಗಿತ್ತು. ಅದರಲ್ಲೂ, 2020-21ರಲ್ಲಿ 13,327 ಕಿ.ಮೀ ರಸ್ತೆ ನಿರ್ಮಿಸಲಾಗಿತ್ತು. ಹಾಗೆಯೇ, 2023-24ರಲ್ಲಿ 12,349 ಕಿ.ಮೀ. ಹಾಗೂ ಪ್ರಸಕ್ತ ವರ್ಷದಲ್ಲಿ 10,500 ಕಿ.ಮೀ ರಸ್ತೆ ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ. ಈಗ ಮುಂದಿನ ಹಣಕಾಸು ವರ್ಷದಲ್ಲೂ 10 ಸಾವಿರ ಕಿ.ಮೀ ರಸ್ತೆ ನಿರ್ಮಿಸಲು ಗುರಿ ನಿಗದಿಪಡಿಸಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಹೆದ್ದಾರಿ ನಿರ್ಮಾಣದ ಬಗ್ಗೆ ಮಾತನಾಡಿದ್ದ ನಿತಿನ್ ಗಡ್ಕರಿ, ಕಳೆದ 10 ವರ್ಷಗಳಲ್ಲಿ ದ್ವಿಪಥ ಇದ್ದ 25 ಸಾವಿರ ಕಿ.ಮೀ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಮಾರ್ಪಡಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು 10 ಲಕ್ಷ ಕೋಟಿ ರೂಪಾಯಿ ವ್ಯಯಿಸಿದೆ ಎಂದು ತಿಳಿಸಿದ್ದರು.
ಹಾಗೆಯೇ, ಚತುಷ್ಪಥ ಇದ್ದ 16 ಸಾವಿರ ಕಿ.ಮೀ ರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿ ಮಾರ್ಪಡಿಸಲಾಗಿದೆ. ಇದಕ್ಕಾಗಿ 6 ಲಕ್ಷ ಕೋಟಿ ರೂ. ವ್ಯಯಿಸಲಾಗಿದೆ ಎಂದು ಹೇಳಿದ್ದರು. ಇದರ ಜತೆಗೆ, ಉತ್ತಮ ರಸ್ತೆಗಳ ನಿರ್ಮಾಣಕ್ಕಾಗಿ ಟೋಲ್ ಸಂಗ್ರಹಿಸುವುದು ಕೂಡ ಅನಿವಾರ್ಯವಾಗಿದೆ ಎಂಬುದಾಗಿಯೂ ಸ್ಪಷ್ಟಪಡಿಸಿದ್ದರು.