ಬೆಂಗಳೂರು: ದೇಶದ ಖಾಸಗಿ ಕಂಪನಿ ಉದ್ಯೋಗಿಗಳಿಗೆ ನಿವೃತ್ತಿ ನಿಧಿ ರೂಪಿಸುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಹೊಸ ಯೋಜನೆಯನ್ನು ಆರಂಭಿಸಿದೆ. ಉದ್ಯೋಗಿಗಳ ದಾಖಲಾತಿ ಯೋಜನೆ-2025ಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಇದರಿಂದ ಉದ್ಯೋಗಿಗಳು ಸುಲಭವಾಗಿ ಪಿಎಫ್ ಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹಾಗಾದರೆ, ಏನಿದು ಹೊಸ ಯೋಜನೆ? ಇದರ ಪ್ರಯೋಜನಗಳು ಏನು ಎಂಬುದರ ಮಾಹಿತಿ ಇಲ್ಲಿದೆ.
ಇಪಿಎಫ್ಒ 73ನೇ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಂಡಾವೀಯ ಅವರು ಹೊಸ ಯೋಜನೆಗೆ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, “ಇಪಿಎಫ್ಒ ಎಂಬುದು ಕೇವಲ ನಿವೃತ್ತಿ ನಿಧಿ ಅಲ್ಲ. ಇದು ಖಾಸಗಿ ಉದ್ಯೋಗಿಗಳಿಗೆ ನೀಡುವ ಸಾಮಾಜಿಕ ಭದ್ರತೆಯಾಗಿದೆ. ಶೀಘ್ರದಲ್ಲೇ ಇಪಿಎಫ್ಒ 3.0 ಯೋಜನೆಗೂ ಚಾಲನೆ ನೀಡಲಾಗುತ್ತದೆ. ಇದರಿಂದ ಇಪಿಎಫ್ಒ ಸದಸ್ಯರಿಗೆ ಹತ್ತಾರು ಅನುಕೂಲಗಳಾಗಲಿವೆ” ಎಂದು ಮಾಹಿತಿ ನೀಡಿದರು.
ಉದ್ಯೋಗಿಗಳ ದಾಖಲಾತಿ ಯೋಜನೆ ಅನ್ವಯ, ಉದ್ಯೋಗದಾತ ಕಂಪನಿಗಳು ಉದ್ಯೋಗಿಗಳು ಯಾವುದೇ ಕಾರಣಕ್ಕಾಗಿ ಇಪಿಎಫ್ಒಗೆ ನೋಂದಣಿ ಮಾಡಿಕೊಳ್ಳದಿದ್ದರೆ, ಈಗಲೂ ನೋಂದಣಿ ಮಾಡಿಕೊಳ್ಳಬಹುದು. ಇದಕ್ಕೂ ಮೊದಲು ಉದ್ಯೋಗಿಗಳ ಪಿಎಫ್ ಪಾಲು ಕಡಿತಗೊಳ್ಳದಿದ್ದರೂ, ಈಗ ಕೇವಲ 100 ರೂಪಾಯಿ ದಂಡ ಪಾವತಿಸುವ ಮೂಲಕ ಹೊಸದಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದು ಸರ್ಕಾರ ತಿಳಿಸಲಾಗಿದೆ.
ನವೆಂಬರ್ 1ರಿಂದಲೇ ಹೊಸ ಯೋಜನೆ ಆರಂಭವಾಗಿದೆ. 2017ರ ಜುಲೈ 1ರಿಂದ 2025ರ ಅಕ್ಟೋಬರ್ 31ರ ಅವಧಿಯಲ್ಲಿ ಉದ್ಯೋಗಕ್ಕೆ ಸೇರಿದ ಉದ್ಯೋಗಿಗಳು ಈಗ ಸುಲಭವಾಗಿ ಇಪಿಎಫ್ಒಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಯಾವುದೇ ಕಾರಣಕ್ಕಾಗಿ ಇಪಿಎಫ್ಒಗೆ ಸೇರದಿದ್ದರೂ, ಈಗ 100 ರೂ. ದಂಡ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ : ರೈಲ್ ವ್ಹೀಲ್ ಫ್ಯಾಕ್ಟರಿಯಲ್ಲಿ 15 ಹುದ್ದೆಗಳ ನೇಮಕ : ಬೆಂಗಳೂರಿನಲ್ಲೇ ಉದ್ಯೋಗ


















