ಬೆಂಗಳೂರು : ರಾಜ್ಯದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಪ್ರತಿ ಟನ್ ಕಬ್ಬಿಗೆ 3300 ರೂ. ನೀಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಪ್ರತಿ ಟನ್‌ಗೆ ನೀಡುವ 3300 ರೂಪಾಯಿಯಲ್ಲಿ ಕಾರ್ಖಾನೆಗಳು 3,250 ರೂ. ನೀಡಬೇಕಾಗುತ್ತದೆ. ಸರ್ಕಾರ ಸಹಾಯಧನವಾಗಿ 50 ರೂ. ನೀಡಲಿದೆ. ಈ ಪೈಕಿ 3,200 ರೂಪಾಯಿಯನ್ನ ಕಾರ್ಖಾನೆಗಳು ಒಂದೇ ಕಂತಿನಲ್ಲಿ ಕೊಡಬೇಕು. ಉಳಿದ 50 ರೂ. 6 ತಿಂಗಳ ನಂತರ ಕಾರ್ಖಾನೆಗಳು ಕೊಡಬೇಕು. 50 ರೂ. ಸಹಾಯಧನ ಸರ್ಕಾರ ನೀಡಲಿದೆ. ಸುಮಾರು 81 ಸಕ್ಕರೆ ಕಾರ್ಖಾನೆ ಮಾಲೀಕರು ಇಂದಿನ ಸಭೆಯಲ್ಲಿ ಭಾಗಿಯಾಗಿದ್ದರು. 1 ಸರ್ಕಾರಿ ಶುಗರ್ ಪ್ಯಾಕ್ಟರಿ ಉಳಿದವೆಲ್ಲ ಖಾಸಗಿ ಶುಗರ್ ಪ್ಯಾಕ್ಟರಿ ಮಾಲೀಕರು ಹಾಜರಿದ್ದರು.
ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಬ್ಬಿನ ರಿಕವರಿಗೆ 3250 ರೂಪಾಯಿಯನ್ನು ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕು. ಇದಕ್ಕೆ ಸರ್ಕಾರ 50 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ. ಸಕ್ಕರೆ ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯುನಿಟ್‌ಗೆ 60 ಪೈಸೆ ತೆರಿಗೆ ನಿಗದಿಪಡಿಸುವ ಪ್ರಸ್ತಾವನೆಯನ್ನು ಮರು ಪರಿಶೀಲಿಸಬೇಕು ಎಂದು ಕಾರ್ಖಾನೆ ಮಾಲೀಕರು ಮನವಿ ಮಾಡಿದ್ದು, ಇದರ ಮರು ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ.
ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ನಿರಂತರವಾಗಿ ಸಂವಾದ ಮಾಡಲಾಗಿದ್ದು, ರೈತರ ಹಿತದೃಷ್ಟಿಯಿಂದ ತೀರ್ಮಾನ ಕೈಗೊಳ್ಳಲಾಗಿದೆ, ಕೇಂದ್ರ ಸರ್ಕಾರದ ಮುಂದೆ ನಿಯೋಗ ತೆಗೆದುಕೊಂಡು ಹೋಗುವ ಬಗ್ಗೆ ಸಹ ತೀರ್ಮಾನ ಆಗಿದೆ, ವಿದ್ಯುತ್ ತೆರಿಗೆ ಕಡಿಮೆ ಮಾಡಲು ಮನವಿ ಬಂದಿದೆ. ಇದಕ್ಕೆ ಪ್ರತ್ಯೇಕ ಸಭೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ನಿನ್ನ ತೂಕ ಎಷ್ಟು? – ಯೂಟ್ಯೂಬರ್ ಪ್ರಶ್ನೆಗೆ ರೊಚ್ಚಿಗೆದ್ದ ನಟಿ ಗೌರಿ ಕಿಶನ್!



















