ಬೆಂಗಳೂರು: ಈಗಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನೇ (ಎನ್ ಪಿ ಎಸ್) ಮುಂದುವರಿಸಬೇಕಾ ಅಥವಾ ಹೊಸದಾಗಿ ಜಾರಿಗೆ ತಂದಿರುವ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)ಯನ್ನು ಆಯ್ಕೆ ಮಾಡಿಕೊಳ್ಳಬೇಕಾ ಎಂಬ ಗೊಂದಲ ಕೇಂದ್ರ ಸರ್ಕಾರಿ ನೌಕರರನ್ನು ಕಾಡುತ್ತಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ಯುಪಿಎಸ್ ಯೋಜನೆಯ ಆಯ್ಕೆಗಾಗಿ ನೀಡಿದ್ದ ಗಡುವನ್ನು ಈಗ ನವೆಂಬರ್ 30ರವರೆಗೆ ವಿಸ್ತರಣೆ ಮಾಡಿದೆ.
ಎನ್ ಪಿ ಎಸ್ ಆಯ್ಕೆ ಮಾಡಿಕೊಂಡಿರುವ ಎಲ್ಲ ನೌಕರರು ಯುಪಿಎಸ್ ಆಯ್ಕೆ ಮಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರವು ಸೆಪ್ಟೆಂಬರ್ 30ರ ಗಡುವು ನೀಡಿತ್ತು. ಆದರೆ, ಕೇಂದ್ರದ 23 ಲಕ್ಷ ನೌಕರರಲ್ಲಿ ಕೇವಲ 1 ಲಕ್ಷ ಉದ್ಯೋಗಿಗಳು ಯುಪಿಎಸ್ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿಯೇ, ಕೇಂದ್ರ ಸರ್ಕಾರವು ಈಗ ಗಡುವನ್ನು ಇನ್ನೂ ಎರಡು ತಿಂಗಳು ವಿಸ್ತರಣೆ ಮಾಡಿದೆ. ಆ ಮೂಲಕ ಹೆಚ್ಚಿನ ನೌಕರರನ್ನು ಸೆಳೆಯಲು ಪ್ರಯತ್ನಿಸಿದೆ.
ಯುಪಿಎಸ್ ಯೋಜನೆ ಆಯ್ಕೆ ಮಾಡಿಕೊಂಡರೆ ನೌಕರರು ಮರಳಿ ಎನ್ ಪಿ ಎಸ್ ಯೋಜನೆ ಆಯ್ಕೆ ಮಾಡಿಕೊಳ್ಳಲು ಆಗುವುದಿಲ್ಲ. ಆದಾಗ್ಯೂ, ಯುಪಿಎಸ್ ಯೋಜನೆ ಆಯ್ಕೆ ಮಾಡಿಕೊಂಡವರಿಗೆ ನಿವೃತ್ತಿ ಬಳಿಕ ಪಿಂಚಣಿ ಸೌಲಭ್ಯವೂ ಸಿಗಲಿದೆ. ಇಷ್ಟಾದರೂ ಹೆಚ್ಚಿನ ನೌಕರರು ಎನ್ ಪಿಎಸ್ ಯೋಜನೆಯನ್ನೇ ಮುಂದುವರಿಸಲು ಆಸಕ್ತಿ ತೋರಿದ್ದಾರೆ.
ಯುಪಿಎಸ್ ಅನ್ವಯ ನೌಕರರು ಕನಿಷ್ಠ 10 ಸಾವಿರ ರೂಪಾಯಿ ಪಿಂಚಣಿ ಪಡೆಯಲು 10 ವರ್ಷಗಳ ಕಾಲ ಕೆಲಸ ಮಾಡಬೇಕು. ಸಂಬಳದ ಶೇ.50ರಷ್ಟು ಪಿಂಚಣಿ ಪಡೆಯಲು 25 ವರ್ಷ ಕೆಲಸ ಮಾಡಿರಲೇಬೇಕು ಎಂಬ ನಿಯಮವಿದೆ. ಇದರಿಂದಾಗಿಯೇ ನೌಕರರು ಯುಪಿಎಸ್ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.



















