ಬೆಂಗಳೂರು : ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ತುಟ್ಟಿ ಭತ್ಯೆಯನ್ನು (Dearness Allowance) ಶೇ. 2ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ.
ರಾಜ್ಯ ಸರ್ಕಾರಿ ನೌಕರರುಗಳಿಗೆ 1ನೇ ಜುಲೈ 2025ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇ.12.25 ರಿಂದ ಶೇ.14.25ಗೆ ಏರಿಕೆ ಮಾಡಿದೆ.
ಸರ್ಕಾರದ ಈ ನಿರ್ಧಾರವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಸ್ವಾಗತಿಸಿದ್ದು, ನೌಕರರ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿ ಭತ್ಯೆ ಘೋಷಿಸಿದ ಬೆನ್ನಲ್ಲೇ ಸಾಮಾನ್ಯವಾಗಿ ರಾಜ್ಯ ಸರ್ಕಾರವೂ ಏರಿಕೆ ಮಾಡುತ್ತದೆ. ವಿಜಯದಶಮಿಯ ಮುನ್ನ ದಿನ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಹೆಚ್ಚುವರಿ 3% ತುಟ್ಟಿ ಭತ್ಯೆ ನೀಡಲು ಒಪ್ಪಿಗೆ ನೀಡಿತ್ತು. ಬೆಲೆ ಏರಿಕೆಯನ್ನು ಸರಿದೂಗಿಸಲು, ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚುವರಿ ಕಂತು ತುಟ್ಟಿ ಭತ್ಯೆ (DA) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (DR) ನೀಡಲು ಅನುಮೋದನೆ ನೀಡಿತ್ತು.