ಬೆಂಗಳೂರು: ಬೆಂಗಳೂರು ಅರಮನೆಯ ಜಾಗ ಬಳಕೆ ಮತ್ತು ನಿಯಂತ್ರಣ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಡಿದ್ದಾರೆ. ಇಂದು ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Thawar Chand Gehlot) ಅಂಕಿತ ಹಾಕಿದ್ದಾರೆ. ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಆಧ್ಯಾದೇಶ – 2025 ಸರ್ಕಾರದ ಸುಗ್ರೀವಾಜ್ಞೆ ಜ. 27ರಿಂದಲೇ ಜಾರಿಗೆ ಬಂದಿದೆ. ಯಾವುದೇ ಮೂಲಭೂತ ಸೌಕರ್ಯಕ್ಕೆ ಭೂಮಿ ಬಳಸುವುದು ಸರ್ಕಾರದ ಹಕ್ಕು. ಹೀಗಾಗಿ ಅರಮನೆ ಜಾಗದ ನಿಯಂತ್ರಣ ಕೂಡ ಸರ್ಕಾರದ ಸುಪರ್ದಿಗೆ ಬರುತ್ತದೆ. ಈ ಎಲ್ಲ ಕಾರಣಗಳಿಂದ ಈಗಾಗಲೇ ಸರ್ಕಾರವು ಸುಗ್ರೀವಾಜ್ಞೆ(Ordinance) ಕುರಿತು ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.
ಅರಮನೆ ಮೈದಾನದ ರಸ್ತೆ ಅಗಲೀಕರಣ ಉದ್ದೇಶಕ್ಕೆ ಟಿಡಿಆರ್(TDR) ನೀಡಲು ರಾಜ್ಯ ಸರ್ಕಾರ ಸಿದ್ಧವಿಲ್ಲ. ಒಂದು ವೇಳೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಜಾರಿಗೊಳಿಸಿದರೆ ಸರ್ಕಾರಕ್ಕೆ 3,011.66 ಕೋಟಿ ರೂ. ಆರ್ಥಿಕ ಹೊರೆಯಾಗಲಿದೆ. ಹೀಗಾಗಿ ರಾಜ್ಯ ಸರ್ಕಾರವು ಸುಗ್ರೀವಾಜ್ಞೆ(Ordinance) ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಸುಗ್ರೀವಾಜ್ಞೆ ಕ್ರಮವು ಸದ್ಭಾವನೆಯಿಂದ ಕೈಗೊಂಡ ಕ್ರಮ ಎಂದು ಕೂಡ ಸರ್ಕಾರ ಹೇಳಿದೆ. ಈ ಮೂಲಕ ರಾಜ್ಯ ಸರ್ಕಾರವು, ರಾಜಮನೆತನಕ್ಕೆ ಸೆಡ್ಡು ಹೊಡೆದಿದೆ. ಅಲ್ಲದೇ, ಈ ಪ್ರಕರಣದಲ್ಲಿ ಅಧಿಕಾರ ವರ್ಗದ ವಿರುದ್ಧ ಯಾರೂ ಸಿವಿಲ್, ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿಲ್ಲ. ಈ ಮೂಲಕ ಸರ್ಕಾರವು ಅಧಿಕಾರಿಗಳ ರಕ್ಷಣೆಯನ್ನೂ ಮಾಡಿದೆ.