ಬೆಂಗಳೂರು: ರಾಜ್ಯದಲ್ಲಿ ಮತ್ತೆ ರಾಜ್ಯಪಾಲರು ವರ್ಸಸ್ ರಾಜ್ಯ ಸರ್ಕಾರ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ವಿಧೇಯಕಗಳಿಗೆ ಅಂಕಿತ ಹಾಕುವ ವಿಚಾರಕ್ಕೆ ಮತ್ತೆ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ಮಧ್ಯೆ ತಿಕ್ಕಾಟ ಶುರುವಾಗಿದೆ.
ರಾಜ್ಯಪಾಲರು ಮತ್ತೆ ಎರಡು ವಿಧೇಯಕಗಳಿಗೆ ಸಹಿ ಹಾಕದೆ ವಾಪಾಸ್ ಕಳುಹಿಸಿದ್ದಾರೆ. ವಾಪಾಸ್ ಕಳುಹಿಸಿರುವ ವಿಧೇಯಕಗಳಿಗೆ ಸ್ಪಷ್ಡನೆ ಕೇಳಿ ಮರಳಿ ಕಳುಹಿಸಿದ್ದಾರೆ. ಕರ್ನಾಟಕ ಸಹಕಾರಿ ಸಂಘಗಳ (ತಿದ್ದುಪಡಿ) ವಿಧೇಯಕ – 2024 , ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ – 2024 ವಿಧೇಯಕಗಳ ಕುರಿತು ಸ್ಪಷ್ಟನೆ ಕೇಳಿ ವಾಪಾಸ್ ಕಳುಹಿಸಿದ್ದಾರೆ. ಕರ್ನಾಟಕ ಸಹಕಾರಿ ಸಂಘಗಳ (ತಿದ್ದುಪಡಿ) ವಿಧೇಯಕ – 2024ಕ್ಕೆ ಹಲವು ಆಕ್ಷೇಪಗಳನ್ನು ರಾಜ್ಯಪಾಲರು ಎತ್ತಿದ್ದಾರೆ.
ಸಹಕಾರಿ ಸಂಘಗಳಿಗೆ ಮೀಸಲಾತಿ ಆಧಾರದ ಮೇಲೆ ನಾಮನಿರ್ದೇಶನ ಮಾಡುವ ತಿದ್ದುಪಡಿಯನ್ನು ರಾಜ್ಯ ಸರ್ಕಾರ ಮಾಡಿತ್ತು. ಆದರೆ, ಈ ತಿದ್ದುಪಡಿಗೆ ಈಗ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡುವುದು ಸರಿಯಾದ ಕ್ರಮವಲ್ಲ ಎಂದು ಗವರ್ನರ್ ಆಕ್ಷೇಪ ಎತ್ತಿದ್ದಾರೆ. ನಾಮ ನಿರ್ದೇಶಿತರಿಗೆ ಮತದಾನದ ಹಕ್ಕುಗಳನ್ನು ನೀಡಿದರೆ ಸಂಘದ ನಿಯಂತ್ರಣಕ್ಕೆ ಅವಕಾಶ ಕೊಟ್ಟಂತೆ. ಈ ಮೂಲಕ ಚುನಾಯಿತ ಸದಸ್ಯರ ಹಕ್ಕುಗಳನ್ನು ಹಿಂಬಾಗಿಲಿನ ಮೂಲಕ ಕಸಿದುಕೊಂಡಂತಾಗುತ್ತದೆ. ಇದು ಸಹಕಾರಿ ಕ್ಷೇತ್ರದ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ಹೆಜ್ಜೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ – 2024ಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ಗವರ್ನರ್, ಈ ವಿಧೇಯಕದಲ್ಲಿ ಸಹಕಾರಿ ಚುನಾವಣಾ ಪ್ರಾಧಿಕಾರ ರದ್ದುಗೊಳಿಸುವುದಾಗಿತ್ತು. ಸಹಕಾರ ಸಂಘಗಳ ಚುನಾವಣೆ ಸ್ವತಂತ್ರ ಮತ್ತು ನ್ಯಾಯಯುತವಾಗಿ ನಡೆಸಲು ಪ್ರಾಧಿಕಾರವಿದೆ. ಆರ್ಥಿಕ ಹೊರೆಯ ಕಾರಣದಿಂದಾಗಿ ಸಹಕಾರಿ ಚುನಾವಣಾ ಪ್ರಾಧಿಕಾರಗಳನ್ನು ರದ್ದುಗೊಳಿಸುವ ಪ್ರಸ್ತಾಪವು ಸೂಕ್ತವಲ್ಲ ಎಂದಿದ್ದಾರೆ.