ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳೊಂದಿಗೆ ಮಂಡಲೋತ್ಸವವನ್ನು ಆ. 1 ರಿಂದ ಸೆ. 17ರ ತನಕ (48 ದಿನ) ಆಚರಿಸಲು ಪರ್ಯಾಯ ಶ್ರೀಪಾದರ ಮಾರ್ಗದರ್ಶನದಲ್ಲಿ ಪರ್ಯಾಯ ಪುತ್ತಿಗೆ ಮಠ ಶ್ರೀಕೃಷ್ಣ ಮಠದ ಆಡಳಿತ ಮಂಡಳಿ ನಿರ್ಧರಿಸಿದೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜು. 25ರಂದು ಮಂಡಲೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಯಶ್‌ಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಶ್ರೀಕೃಷ್ಣನ ಕೋಟಿ ಮಂತ್ರ ಜಪ :
ಪರ್ಯಾಯ ಶ್ರೀಪಾದರು ತಮ್ಮ ಗುರುಗಳಾದ ತಪಸ್ವಿ ಶ್ರೀ ಸುಧೀಂದ್ರತೀರ್ಥರ ಪ್ರೇರಣೆಯಂತೆ “ಸ್ವಾಮಿ ಶ್ರೀಕೃಷ್ಣಾಯ ನಮಃ’ ಎಂಬ ಮಂತ್ರ ಜಪವನ್ನು ಜಾತಿ, ಲಿಂಗ ಭೇದವಿಲ್ಲದೆ ಕೃಷ್ಣ ಭಕ್ತರಿಂದ ರಾಷ್ಟೋದ್ಧಾರದ ಜತೆಗೆ ದೇಶಕ್ಕೆ ಎದುರಾದ ದುರಿತಗಳು ದೂರವಾಗಬೇಕು ಎಂಬ ಆಶಯದೊಂದಿಗೆ ನಡೆಸಲು ಸಂಕಲ್ಪಿಸಿದ್ದಾರೆ. ಈ ಜಪಯಜ್ಞವನ್ನು ಸೆ. 18 ರಿಂದ 20ರೊಳಗೆ ಭಕ್ತರು ಕೃಷ್ಣ ಮಠಕ್ಕೆ ಸಮರ್ಪಿಸಿ ಪ್ರಸಾದ ಪಡೆಯಲು ಅವಕಾಶವಿದೆ. ಆ. 1 ಮತ್ತು ಆ. 15ರಂದು ಶ್ರೀಕೃಷ್ಣ ಮಠದಲ್ಲಿ ಸಾಮೂಹಿಕವಾಗಿ ಶ್ರೀಕೃಷ್ಣ ಮಂತ್ರಜಪ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಇನ್ನು, ಶ್ರೀಕೃಷ್ಣ ಮಠದಲ್ಲಿ ಸೌರಮಾನ ಪದ್ಧತಿಯಂತೆ ಸೆ. 14 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸೆ. 15ರಂದು ಲೀಲೋತ್ಸವವು ಹುಲಿವೇಷ, ಮೊಸರು ಕುಡಿಕೆ, ವಿವಿಧ ಆಚರಣೆಗಳೊಂದಿಗೆ ಸಾಂಪ್ರದಾಯಿಕವಾಗಿ ನಡೆಯಲಿದೆ.