ಬೆಂಗಳೂರು: “ನ. 1ರಿಂದ ಬಿ ಖಾತೆಗಳನ್ನು ಎ ಖಾತೆಗಳಾಗಿ ಬದಲಾವಣೆ ಮಾಡುವ ಐತಿಹಾಸಿಕ ನಿರ್ಣಯಕ್ಕೆ ಸರ್ಕಾರ ತೀರ್ಮಾನ ಮಾಡಿದ್ದು, ಇದು ಬೆಂಗಳೂರಿನ 15 ಲಕ್ಷ ಆಸ್ತಿಗಳ ಮಾಲೀಕರಿಗೆ ಉಪಯೋಗವಾಗುತ್ತದೆ. ಇದೊಂದು ಕ್ರಾಂತಿಕಾರಕ ತೀರ್ಮಾನ. ಆಸ್ತಿ ಶುದ್ಧೀಕರಣಕ್ಕೆ ನಾಂದಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಜಿಬಿಎ ವ್ಯಾಪ್ತಿಯ ಬಿ-ಖಾತಾ ನಿವೇಶನ ಮಾಲೀಕರಿಗೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೂ ಎ-ಖಾತಾ ನೀಡಲು ಹೊಸದಾಗಿ ಜಾರಿಗೊಳಿಸಿರುವ ಆನ್‌ಲೈನ್ ವ್ಯವಸ್ಥೆಗೆ ಇಂದು(ಬುಧವಾರ) ವಿಧಾನಸೌಧದಲ್ಲಿ ಚಾಲನೆ ನೀಡಿ ಮಾತನಾಡಿದ ಡಿ.ಕೆ.ಶಿವಕುಮಾರ್, “2 ಸಾವಿರ ಚ.ಮೀ. ವಿಸ್ತೀರ್ಣದ ಆಸ್ತಿಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರುತ್ತವೆ. 2 ಸಾವಿರ ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದ ಆಸ್ತಿಗಳಿಗೆ ಕ್ಯಾಡ್ ಡ್ರಾಯಿಂಗ್ ಸೇರಿದಂತೆ ಇತರೇ ದಾಖಲೆಗಳನ್ನು ನೀಡಬೇಕಾಗುತ್ತದೆ. ನ.1 ರಿಂದ ಪ್ರಾರಂಭವಾಗುವ ಈ ಅಭಿಯಾನ 100 ದಿನಗಳು ನಡೆಯಲಿದೆ. 500 ರೂಪಾಯಿ ಅರ್ಜಿ ಶುಲ್ಕವನ್ನು ಕಟ್ಟಿ ಆನ್ ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡರೆ ಪಾಲಿಕೆ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಸೇವೆ ನೀಡುತ್ತಾರೆ” ಎಂದು ಮಾಹಿತಿ ನೀಡಿದ್ದಾರೆ.
“ಆಸ್ತಿ ಮಾಲೀಕರು ಸದರಿ ಆಸ್ತಿಯ ಗೈಡೆನ್ಸ್ ದರದ ಶೇ.5 ರಷ್ಟನ್ನು ಶುಲ್ಕವಾಗಿ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಇಂತಹ ಬಡಾವಣೆಗಳಿಗೆ ವಿದ್ಯುತ್, ನೀರು, ಒಳಚರಂಡಿ ಸೇರಿದಂತೆ ಇತರೇ ಮೂಲಸೌಕರ್ಯ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಈ ದೃಷ್ಟಿಯಿಂದ ಗೈಡೆನ್ಸ್ ದರದ ಶೇ.5 ರಷ್ಟು ಮಾತ್ರ ಶುಲ್ಕ ವಿಧಿಸಲಾಗಿದೆ. 100 ದಿನದ ನಂತರ ಹೆಚ್ಚುವರಿ ಶುಲ್ಕ ನಿಗದಿ ಮಾಡಲಾಗುತ್ತದೆ. ಹೆಚ್ಚುವರಿ ಶುಲ್ಕದ ಪ್ರಮಾಣ ಆನಂತರ ತಿಳಿಸಲಾಗುವುದು” ಎಂದಿದ್ದಾರೆ.
“ಪ್ರತಿ ಪಾಲಿಕೆಯು ಎರಡೆರಡು ಸ್ಥಳಗಳಲ್ಲಿ ‘ಹೆಲ್ಪ್ ಡೆಸ್ಕ್’ (ಕಚೇರಿ) ಗಳನ್ನು ತೆಗೆಯಲಾಗುವುದು. ಬೆಂಗಳೂರು ಒನ್ ಕೇಂದ್ರದಲ್ಲಿಯೂ ನೋಂದಣಿಯಾಗಲು ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರು ಯಾರೂ ಸಹ ಒಂದೇ ಒಂದು ರೂಪಾಯಿ ಲಂಚ ನೀಡುವಂತಿಲ್ಲ” ಎಂದು ತಿಳಿಸಿದ್ದಾರೆ.
“ಓಸಿ, ಸಿಸಿಗೂ ಇದಕ್ಕೂ ಸಂಬಂಧವಿಲ್ಲ. ಬಿ ಖಾತಾ ಮಾಲೀಕರಿಗೆ ಕಟ್ಟಡ ಯೋಜನೆ ಅನುಮೋದನೆ ಸದ್ಯಕ್ಕೆ ದೊರೆಯುವುದಿಲ್ಲ. ಬಿ ಖಾತಾ ಬಹುಮಹಡಿ ಕಟ್ಟಡಗಳು ಎ ಖಾತೆಗಳಾಗಿ ಬದಲಾವಣೆ ಆಗುವುದಿಲ್ಲ. ಮೊದಲು ಭೂಮಿಗೆ ನಾವು ಖಾತೆ ನೀಡುತ್ತೇವೆ. ಆ ಜಾಗದಲ್ಲಿರುವ ಕಟ್ಟಡ ಕಾನೂನಿನ ವ್ಯಾಪ್ತಿಯಲ್ಲಿ ಇದೆಯೇ ಇಲ್ಲವೇ ಎಂದು ಮೊದಲು ನೋಡುತ್ತೇವೆ. ಆನಂತರ ಕಟ್ಟಡ ಅದಕ್ಕೆ ಏನು ಶುಲ್ಕ ಎಂದು ನಿಗದಿ ಮಾಡುತ್ತೇವೆ. ಅನಿಯಂತ್ರಿತ, ಅನಧಿಕೃತ ಮಾರಾಟ ಮತ್ತು ಅಕ್ರಮ ಆಸ್ತಿಗಳಿಗೆ ಮುಂದಕ್ಕೆ ಅವಕಾಶ ದೊರೆಯದಂತೆ ಮಾಡುವುದು, ನಕಲಿ ಖಾತೆಗಳನ್ನು ಸೃಷ್ಟಿಸಿ ಮೋಸ ಮಾಡುವುದನ್ನು ತಪ್ಪಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.
“ಅರ್ಜಿ ಹಾಕಿದ ನಂತರ ಪಾಲಿಕೆ ಅಧಿಕಾರಿಗಳು ಪ್ರತಿ ಆಸ್ತಿಯ ಮುಂದೆ ಮಾಲೀಕನ ನಿಲ್ಲಿಸಿ ವಿಡಿಯೋ, ಫೋಟೊ ದಾಖಲೀಕರಣ ಮಾಡಿ ಅಪ್ ಲೋಡ್ ಮಾಡುತ್ತಾರೆ. ಇದನ್ನು ಪರಿಶೀಲಿಸಲು ಹಾಗೂ ತಕರಾರುಗಳನ್ನು ಸಲ್ಲಿಸಲು ಸಹ ಅವಕಾಶ ನೀಡಲಾಗಿದೆ. ಸರ್ಕಾರಿ ಜಾಗ, ಪಿಟಿಸಿಎಲ್ ಪ್ರಕರಣಗಳ ಆಸ್ತಿಗಳು, 94 ಸಿ ಸೇರಿದಂತೆ ಇತರೇ ಪ್ರಕರಣಗಳ ಜಾಗ ಇಲ್ಲಿ ಒಳಪಡುವುದಿಲ್ಲ” ಎಂದು ತಿಳಿಸಿದ್ದಾರೆ.